ಮಡಿಕೇರಿ, ಮೇ 27: ಪ್ರವಾಸಿ ತಾಣ ಮಾಂದಲಪಟ್ಟಿಗೆ ನಂದಿಮೊಟ್ಟೆ ಬಳಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ಜೀಪು ಚಾಲಕರು ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೇವಸ್ತೂರು ಗ್ರಾಮಸ್ಥರು ಆರೋಪಿಸಿದ್ದಾರೆ. ಇಂದು ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ದು ಈ ಬಗ್ಗೆ ಮಾಹಿತಿಯಿತ್ತರು.ಸುಮಾರು 40 ಜೀಪುಗಳು ಪ್ರವಾಸಿಗರನ್ನು ಮಾಂದಲಪಟ್ಟಿಗೆ ಕರೆದೊಯ್ದು ಕರೆ ತರುವ ಕಾಯಕದಲ್ಲಿ ತೊಡಗಿಸಿಕೊಂಡಿವೆ. ಆದರೆ ಬೇಕಾಬಿಟ್ಟಿಯಾಗಿ ಪ್ರವಾಸಿಗರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಮಾತ್ರವಲ್ಲದೆ ಅತೀ ವೇಗದಿಂದ ಜೀಪು ಚಾಲನೆ ಮಾಡುವ ಮೂಲಕ ರಸ್ತೆಯಲ್ಲಿ ಸಂಚರಿಸಲು ಭಯಪಡಬೇಕಾದ ಪರಿಸ್ಥಿತಿಯನ್ನು

(ಮೊದಲ ಪುಟದಿಂದ) ಜೀಪು ಚಾಲಕರು ಸೃಷ್ಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಪಾದಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥರಾದ ಅರವಿಂದ್, ಪ್ರದೀಪ್ ಇವರುಗಳು ಮಾಂದಲಪಟ್ಟಿ, ಪುಷ್ಪಗಿರಿ ವನ್ಯಧಾಮಕ್ಕೆ ಸೇರಲ್ಪಟ್ಟಿದ್ದರೂ, ಅಲ್ಲಿಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪರಿಣಾಮ ಆಕರ್ಷಣೀಯ ಸ್ಥಳವಾದ ಮಾಂದಲಪಟ್ಟಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇದನ್ನೇ ದಾಳವನ್ನಾಗಿ ಮಾಡಿಕೊಂಡಿರುವ ಜೀಪು ಚಾಲಕರು ಮನಸೋ ಇಚ್ಚೆ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಖಾಸಗಿ ವಾಹನಗಳನ್ನು ತಡೆದು ಇಲ್ಲ ಸಲ್ಲದ ಕಾರಣ ಹೇಳಿ ಪ್ರವಾಸಿಗರನ್ನು ತಮ್ಮ ತಮ್ಮ ಜೀಪುಗಳಲ್ಲಿ ಮಿತಿ ಮೀರಿದ ವೇಗದಲ್ಲಿ ಮಾಂದಲಪಟ್ಟಿಗೆ ಕರೆದೊಯ್ದು, ಕರೆತರಲಾಗುತ್ತಿದೆ. ಇದರಿಂದ ಈ ಭಾಗದ ರಸ್ತೆಗಳೂ ಹಾಳಾಗುತ್ತಿದ್ದು, ಕೂಡಲೇ ನಂದಿಮೊಟ್ಟೆಯಲ್ಲಿ ಜೀಪುಗಳ ನಿಲ್ದಾಣಕ್ಕೆ ನಿರ್ಬಂಧ ಹೇರಬೇಕು ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕೆಂದು ಅವರುಗಳು ಆಗ್ರಹಿಸಿದರು.

ಮಾತಿನ ಚಕಮಕಿ : ಇಂದು ದೇವಸ್ತೂರು ಗ್ರಾಮಸ್ಥರು ಮಾಧ್ಯಮದವರ ಬಳಿ ಸಮಸ್ಯೆ ಬಗ್ಗೆ ಮಾಹಿತಿ ನೀಡುತ್ತಿದ್ದ ವೇಳೆ ಅಲ್ಲಿಗೆ ಜೀಪು ಚಾಲಕರು ಗುಂಪಾಗಿ ಆಗಮಿಸಿದರು. ಸ್ಥಳೀಯರ ಹೇಳಿಕೆಗಳ ಬಗ್ಗೆ ಕೆಲ ಚಾಲಕರು ಆಕ್ಷೇಪ ವ್ಯಕ್ತಪಡಿಸಲು ಮುಂದಾದಾಗ ಗ್ರಾಮಸ್ಥರು ಹಾಗೂ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನೇನು ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನುವಷ್ಟರಲ್ಲಿ ಸ್ಥಳದಲ್ಲಿದ್ದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಪ್ರಕಾಶ್ ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.