ವೀರಾಜಪೇಟೆ, ಮೇ 27: ಕಾಡಾನೆ ಧಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕೆದಮುಳ್ಳೂರಿನಲ್ಲಿ ಘಟನೆ ನಡೆದಿದ್ದು, ತಿಮ್ಮಯ್ಯ ಅಲಿಯಾಸ್ ಸಾಬು (59) ಎಂಬವರೇ ಕಾಡಾನೆ ಧಾಳಿಗೆ ಸಿಲುಕಿದವರಾಗಿದ್ದು, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.ದೇವಯ್ಯ ಎಂಬವರ ಕಾಫಿ ತೋಟದಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ (ಮೊದಲ ಪುಟದಿಂದ) ತಿಮ್ಮಯ್ಯ ಅವರು ಇಂದು ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಚಾಮುಂಡೇಶ್ವರಿ ದೇವಾಲಯದ ಬಳಿ ಕಾಡಾನೆ ಧಾಳಿ ಮಾಡಿದೆ. ದೇವಯ್ಯ ಅವರು ಕಿರುಚಿದ ಶಬ್ಧ ಕೇಳಿ ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ 7 ಮಂದಿ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆನೆ ಕಾಣಿಸಿಕೊಂಡಿದ್ದು, ಅದರಿಂದ ತಪ್ಪಿಸಿಕೊಳ್ಳುವ ಸಂದರ್ಭ ಅರಣ್ಯಾಧಿಕಾರಿ ಜತ್ತಪ್ಪ ಎಂಬವರು ಕಾಲುಜಾರಿ ಬಿದ್ದು ಗಾಯಗೊಂಡಿದ್ದಾರೆ. ಬಳಿಕ ಇಬ್ಬರನ್ನು ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಫಲಕಾರಿಯಾಗದೆ, ತಿಮ್ಮಯ್ಯ ಸಾವನ್ನಪ್ಪಿದ್ದು, ಜತ್ತಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೃತ್ತ ನಿರೀಕ್ಷಕ ಕುಮಾರ ಆರಾಧ್ಯ, ಠಾಣಾಧಿಕಾರಿ ನಂಜುಂಡಸ್ವಾಮಿ ಹಾಗೂ ಸಿಬ್ಬಂದಿ ಸ್ಥಳ ಮಹಜರು ನಡೆಸಿದರು.

-ಡಿ.ಎಂ. ರಾಜ್‍ಕುಮಾರ್