ಮಡಿಕೇರಿ, ಮೇ 26: ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಸಂಬಂಧಿಸಿದ ಗುತ್ತಿಗೆದಾರನಿಗೆ ತಿಂಗಳಿಗೆ ರೂ. 2300 ಹಣ ಸಂಗ್ರಹಿಸಿ ನೀಡಬೇಕು. ಗುತ್ತಿಗೆ ಪಡೆದ ಲಕ್ಷ್ಮಿ ಎಂಟರ್‍ಪ್ರೈಸಸ್‍ನವರಾಗಲಿ, ಸಂಬಂಧಿಸಿದ ಇಲಾಖೆಯವರಾಗಲಿ ಅವರುಗಳಿಗೆ ಯಾವದೇ ರೀತಿಯ ಭದ್ರತೆಗಳನ್ನು ಒದಗಿಸುತ್ತಿಲ್ಲ. ಅವರುಗಳ ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮಡಿಕೇರಿ ವಿಭಾಗದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸ ಲಾಗುವದು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಸುದ್ದಿ ಗೋಷ್ಠಿಯಲ್ಲಿ ಮಾಹಿತಿಯಿತ್ತರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೇರೆಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ, ಕೊಡಗಿನಲ್ಲಿ ಸ್ವಚ್ಛತೆ ಹಾಗೂ ಸ್ವಚ್ಛತಾ ಕಾರ್ಮಿಕರ ಬದುಕು ಉತ್ತಮವಾಗಿದೆ. ಸ್ವಚ್ಛ ಸಮಾಜಕ್ಕಾಗಿ ಶ್ರಮಿಸುವ ಸ್ವಚ್ಛತಾ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ.