ಸೋಮವಾರಪೇಟೆ, ಮೇ 26: ಪಟ್ಟಣದಿಂದ ಕುಶಾಲನಗರ ಸಂಪರ್ಕಿಸುವ ಸೀಗಲುಡುವೆ- ಕೆಂಚಮ್ಮನಬಾಣೆ- ಬೇಳೂರುಬಾಣೆ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಪ್ರಸಕ್ತ ಪ್ರಗತಿಯಲ್ಲಿರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಶಾಸಕ ರಂಜನ್, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಸಾಧಿಸಬೇಕಾದರೆ ಮೊದಲು ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಇಲ್ಲಿನ ರಸ್ತೆಯನ್ನು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ವ್ಯಾಪ್ತಿಗೊಳ ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 6 ಕಿ.ಮೀ. ರಸ್ತೆ ಕಾಮಗಾರಿ ನಡೆಯಲಿದೆ ಎಂದರು. ಈ ಯೋಜನೆ ಯಡಿಯಲ್ಲಿ ನಿರ್ಮಾಣ ಮಾಡುವ ರಸ್ತೆಯ ಗುಣಮಟ್ಟವನ್ನು ಕಾಯಬೇಕಾದ ಗುತ್ತಿಗೆದಾರರು ಮುಂದಿನ 5 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗಿದೆ.

ಅಂತಿಮ ವರ್ಷದಲ್ಲಿ ಮತ್ತೆ ರಸ್ತೆ ಮೇಲೆ ಒಂದು ಪದರ ಡಾಂಬರ್ ಹಾಕುವದರಿಂದ ಸುಮಾರು 10 ವರ್ಷಗಳ ಕಾಲ ರಸ್ತೆ ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದರು.

ಪಿಎಂಜಿಎಸ್ ಯೋಜನೆಯಡಿ ರಸ್ತೆ ನಿರ್ಮಾಣವಾಗಬೇಕೆಂದರೆ ಸುಮಾರು 10 ಮೀಟರ್‍ನಷ್ಟು ಅಗಲ ಜಾಗ ಬಿಟ್ಟುಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ರಸ್ತೆಯುದ್ದಕ್ಕೂ ಇರುವ ಕಾಫಿ ತೋಟಗಳ ಮಾಲೀಕರು ಜಾಗ ಬಿಟ್ಟುಕೊಟ್ಟಿರುವ ಕಾರ್ಯವನ್ನು ಶಾಸಕರು ಶ್ಲಾಘಿಸಿದರು.

ಈ ಸಂದರ್ಭ ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ. ಮಧು, ಗ್ರಾಮದ ಪ್ರಮುಖರುಗಳಾದ ಗೋವಿನಮನೆ ಸುಬ್ಬಯ್ಯ, ಕೆಂಚಮ್ಮಬಾಣೆ ವಸಂತ್ ಪೂಜಾರಿ ಸೇರಿದಂತೆ ಕೆಲವು ಕಾಫಿ ತೋಟಗಳ ಮಾಲೀಕರು ಹಾಜರಿದ್ದರು.