ಮಡಿಕೇರಿ, ಮೇ 27: ಕೊಡಗು ಜಿಲ್ಲೆಯಾದ್ಯಂತ ನೆಲೆಸಿರುವ ಶೋಷಿತ ವರ್ಗಗಳ ಅಥವಾ ದೀನ ದಲಿತರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಕೋಟಿ ಕೋಟಿ ರೂಪಾಯಿ ಅನುದಾನದ ಬಿಡುಗಡೆಗೊಳ್ಳುತ್ತಿದ್ದು, ಈ ಅನುದಾನ ದುರುಪಯೋಗವಾಗದೆ ಸಾಕಾರಗೊಳ್ಳಲೇಬೇಕು. ಪ್ರಸಕ್ತ ಮಡಿಕೇರಿಯಂತಹ ಪುಟ್ಟ ನಗರದಲ್ಲಿ ಈ ಉದ್ದೇಶಕ್ಕಾಗಿ ರೂ. 35 ಕೋಟಿ ಮಂಜೂರಾಗಿದೆ. ಈ ಹಣ ಬಿಡುಗಡೆಯಾಗಿರುವ ಉದ್ದೇಶ ಹಾಗೂ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಸಹಿತ ಜನಪ್ರತಿನಿಧಿಗಳಲ್ಲಿ ತಿಳುವಳಿಕೆ ಕೊರತೆ ಕಾಣುತ್ತಿದೆ. ಇನ್ನೊಂದೆಡೆ ರಾಜಕೀಯ ಒಳಬೇಗುದಿ ಇಡೀ ಯೋಜನೆಯ ಅನುಷ್ಠಾನಕ್ಕೆ ತೊಡಕುಂಟುಮಾಡಿದ್ದು, ಬೀದಿ ರಂಪಾಟಕ್ಕೂ ಕಾರಣವಾಗಿದೆ.

ನಗರಸಭೆಯು ಈ ಬಗ್ಗೆ ರೂಪಿಸಿರುವ ಕ್ರಿಯಾ ಯೋಜನೆಯಲ್ಲಿ ಮಡಿಕೇರಿಯ ಎಲ್ಲಾ 23 ವಾರ್ಡ್‍ಗಳಿಗೆ ಹಣ ಹಂಚಿಕೆ ಮಾಡಿದ್ದರೂ, ಆಯಾ ಜನಪ್ರತಿನಿಧಿಗಳು ಅಲ್ಲಿನ ಶೋಷಿತರಿಗೆ ಯೋಜನೆ ತಲಪಿಸುವ ಬದಲಿಗೆ ಸ್ವಾರ್ಥದ ಚಿಂತನೆಯಲ್ಲಿ ನಗೆಪಾಟಲಿಗೆ ಒಳಗಾಗುವ ಸನ್ನಿವೇಶ ಕಂಡು ಬರುತ್ತಿದೆ.

ನಗರೋತ್ಥಾನ 3ನೇ ಹಂತದ ಕ್ರಿಯಾ ಯೋಜನೆಗೆ ಸರಕಾರ ನಿರ್ದಿಷ್ಟ ಮಾನದಂಡ ವಿಧಿಸಿದೆ.

ಅನುದಾನ ಹಂಚಿಕೆ

ಆ ಪ್ರಕಾರ ಬಿಡುಗಡೆಗೊಂಡಿರುವ ಒಟ್ಟು ರೂ. 35 ಕೋಟಿಯಲ್ಲಿ ನಗರೋತ್ಥಾನ ಕೋಶದ ವೆಚ್ಚ ಶೇ. 3 ರಂತೆ 1.05 ಕೋಟಿ ಮೀಸಲಿಡಲಾಗಿದೆ. ಉಳಿಕೆ ಮೊತ್ತದಲ್ಲಿ ಶೇ. 85 ರಷ್ಟು ರೂ. 28,85,75000 ಮೊತ್ತಕ್ಕೆ ಕೆಲಸಗಳನ್ನು ಕೈಗೊಳ್ಳಬೇಕಿದೆ.

ಈ ಮೊತ್ತದಲ್ಲಿ ರೂ. 15 ಕೋಟಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಎಲ್.ಪಿ.ಸಿ.ಡಿ. ಪ್ರಕಾರ ರೂಪಿಸಲು ಸರಕಾರದ ನಿರ್ದೇಶನವಿದೆ.

ಕೋಶದ 24.10ರಷ್ಟು ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಣ ವಿನಿಯೋಗಿಸಬೇಕಿದ್ದು, ಈ ಮೊತ್ತದಲ್ಲಿ ಪರಿಶಿಷ್ಟ ಜಾತಿಗೆ ಶೇ.17.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 6.95 ರಷ್ಟು ಹಂಚಿಕೆಗೆ ಸೂಚಿಸಲಾಗಿದೆ.

ಈ ಹಣದಲ್ಲಿ ಶೇ.70ರಷ್ಟು ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಸಂಚಾರ ನಿಯಮ ವ್ಯವಸ್ಥೆಗೆ ಮತ್ತು ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಹಾಗೂ ಶೇ.10 ಮಳೆ ನೀರು ಹರಿಯುವಿಕೆ ಚರಂಡಿ ಕಾಮಗಾರಿಗೆ ಬಳಕೆಯಾಗಬೇಕು. ಮಿಕ್ಕ ಶೇ. 20 ಹಣವನ್ನು ಸಮುದಾಯ ಭವನ, ಸಾರ್ವಜನಿಕ ಶೌಚಾಲಯ, ಮಾರುಕಟ್ಟೆ, ಬಸ್ ನಿಲ್ದಾಣಕ್ಕೂ ಬಳಸುವಂತೆ ಅವಕಾಶ ಕಲ್ಪಿಸಲಾಗಿದೆ.

ಮೇಲ್ಕಂಡ ಶೇಕಡವಾರು ಮೊತ್ತವನ್ನು ನಗರೋತ್ಥಾನ ಅಭಿವೃದ್ಧಿಗಾಗಿ ರೂ. 35 ಕೋಟಿಯ ಹಂಚಿಕೆಯೊಂದಿಗೆ ಕಾಮಗಾರಿ ನಿರ್ವಹಣೆ ಅಧಿಕಾರ ನಗರಸಭೆಯಿಂದ ನಡೆಯಬೇಕಿದೆ. ಈ ಹಣ ಹಂಚಿಕೆಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಗೊಂದಲಕ್ಕೆ ಕಾರಣವಾಗಿದೆ.

ನಿರ್ದಿಷ್ಟವಾಗಿ ಮಡಿಕೇರಿ ನಗರಸಭಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಉತ್ತಮ ವ್ಯವಸ್ಥೆ ರೂಪಿಸುವಷ್ಟು ಅನುದಾನ ಬಿಡುಗಡೆಗೊಂಡಿರುವಾಗ, ಪೂರಕ ಕೆಲಸದೊಂದಿಗೆ ದೀನ - ದಲಿತರಿಗಾಗಿ ಸರಕಾರ ಮೀಸಲಿಟ್ಟಿರುವ ಅನುದಾನ ದುರುಪಯೋಗವಾಗದಂತೆ ಸಮಗ್ರ ಯೋಜನೆ ಅನುಷ್ಠಾನಗೊಳ್ಳಬೇಕಿದೆ. ಈ ಎಲ್ಲ ಹಂತದಲ್ಲಿ ಸರಕಾರದ ನಿಯಮ ಪಾಲನೆಯು ಅತ್ಯಗತ್ಯ.

-ಶ್ರೀಸುತ.