ಕುಶಾಲನಗರ, ಮೇ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ಪಂಚಾಯ್ತಿ ಅಧ್ಯಕ್ಷೆ ಜೈನಬಾ ಸ್ಪಷ್ಟಪಡಿಸಿದ್ದಾರೆ. ಪಂಚಾಯಿತಿಯ ಕೆಲವು ಸದಸ್ಯರು ಅಭಿವೃದ್ಧಿಯ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕಳೆದ 2016-17ನೇ ಸಾಲಿನಲ್ಲಿ ಅಂದಾಜು ರೂ. 20 ಲಕ್ಷ ವೆಚ್ಚದಲ್ಲಿ 26 ಕಾಮಗಾರಿಗಳು ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.

ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಹಲವು ಕಾಮಗಾರಿಗಳು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಯಾಗುವದರೊಂದಿಗೆ ಅನುಮೋದನೆಗೊಂಡು ಪ್ರತಿಯೊಬ್ಬ ಸದಸ್ಯರುಗಳು ತಮ್ಮ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೆಲವು ಸದಸ್ಯರು ವಿನಾಕಾರಣ ಗೊಂದಲದ ಹೇಳಿಕೆ ನೀಡಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.

ಸದಸ್ಯರಾದ ಲೋಕನಾಥ್ ಅವರ ವಾರ್ಡ್‍ನಲ್ಲಿ ನಡೆದಿರುವ ಉದ್ಯೋಗಖಾತ್ರಿಗೆ ಸಂಬಂಧಿಸಿದ ಕಾಮಗಾರಿಯ ಹಣ ಬಿಡುಗಡೆಯಾಗಲು ವಿಳಂಭವಾಗಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪಾತ್ರ ಇರುವದಿಲ್ಲ. ನಿಯಮಾನುಸಾರ ತಾನು ಕೆಲಸ ನಿರ್ವಹಿಸುತ್ತಿದ್ದೇನೆ. ತನ್ನ ಅವಧಿಯ ಆಡಳಿತದ ಬಗ್ಗೆ ಯಾವದೇ ನಾಗರಿಕರಿಂದ ಇದುವರೆಗೆ ದೂರುಗಳು ಬಂದಿಲ್ಲ ಎಂದು ಜೈನಬಾ ತಿಳಿಸಿದ್ದಾರೆ. ದುಬಾರೆ ಸಾಕಾನೆ ಶಿಬಿರದ ಮುಂಭಾಗದಲ್ಲಿ ವಾಹನಗಳ ನಿಲುಗಡೆ ಶುಲ್ಕ ಸಂಗ್ರಹ ಬಗ್ಗೆ ಇತ್ತೀಚೆಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ರೂ. 20 ಲಕ್ಷ ಆದಾಯ ಗ್ರಾಮ ಪಂಚಾಯಿತಿಗೆ ಲಭಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.