ಮಡಿಕೇರಿ, ಮೇ 26: ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಅಧ್ಯಕ್ಷ ಎಂ.ಆರ್. ವೆಂಕಟೇಶ್, ಸದಸ್ಯರಾದ ಗೋಕುಲ ನಾರಾಯಣಸ್ವಾಮಿ ನಗರದ ರಾಣಿಪೇಟೆಯ ಸಫಾಯಿ ಕರ್ಮಚಾರಿ ಕಾಲೋನಿಗೆ ಭೇಟಿ ನೀಡಿ ಪೌರಕಾರ್ಮಿಕರ ಸ್ಥಿತಿ ಮತ್ತು ಮೂಲಭೂತ ಸೌಕರ್ಯ ಸಂಬಂಧ ಪರಿಶೀಲನೆ ಮಾಡಿದರು.
ಅಲ್ಲಿನ ಮನೆಗೆ ತೆರಳಿ ಟಾರ್ಪಲ್ ಹೊದಿಕೆಯನ್ನು ಗಮನಿಸಿದ ಅಧ್ಯಕ್ಷರು, ಮನೆ ದುರಸ್ತಿಗಾಗಿ ಏಕೆ ಹಣ ಬಿಡುಗಡೆ ಮಾಡಿಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿಮ್ಮ ಮನೆ ಸೋರುತ್ತಿದ್ದರೆ, ಸುಮ್ಮನಿರುತ್ತಿದ್ದೀರ, ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ತಲಪಿಸುವದು ಬೇಡವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪೌರಕಾರ್ಮಿಕ ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ವ್ಯಾಸಂಗ ಮಾಡುವಂತಾಗಬೇಕು. ಈ ಸಂಬಂಧ ಅಗತ್ಯ ಮಾಹಿತಿಯ ಪಟ್ಟಿ ಒದಗಿಸುವಂತೆ ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರು, ಶೌಚಾಲಯ ಜೊತೆಗೆ ಎಲ್ಲಾ ಕುಟುಂಬಗಳಿಗೂ ಅನಿಲ ಸಂಪರ್ಕ ಹೊಂದಿರಬೇಕು. ಮಕ್ಕಳಿಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಲು ಕ್ರೀಡಾ ಸಾಮಗ್ರಿ ಖರೀದಿಸಿ ಕೊಡುವಂತೆ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.
ಪೌರಕಾರ್ಮಿಕರು ತಾವು ನಿರ್ವಹಿಸುವ ಕೆಲಸ ಸಂದರ್ಭದಲ್ಲಿ ಗ್ಲೌಸ್ ಹಾಗೂ ಗಂಬೂಟು ಬಳಸಬೇಕು. ಪ್ರತೀ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.
ಬಳಿಕ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿ ಶೌಚಗುಂಡಿಯನ್ನು ಪರಿಶೀಲನೆ ಮಾಡಿದ ಅಧ್ಯಕ್ಷರು, ಅಲ್ಲಿನ ಅಶುಚಿತ್ವ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಶೌಚಾಲಯಕ್ಕೆ ತೆರಳುವ ಸಾರ್ವಜನಿಕರಿಂದ 5 ರೂ. ವಸೂಲಿ ಮಾಡುತ್ತಿರುವದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಅಧ್ಯಕ್ಷರು ಪ್ರತೀ ದಿನ ಹೊರಗುತ್ತಿಗೆ ಅವರಿಗೆ 2,300 ರೂ. ಏಕೆ ನೀಡಬೇಕು. ಇದೊಂದು ರೀತಿಯ ಶೋಷಣೆಯಾಗಿದೆ. ಈ ಸಂಬಂಧ ಕೆ.ಎಸ್.ಆರ್.ಟಿ.ಸಿ. ನಿರ್ದೇಶಕರಿಗೆ ಪತ್ರ ಬರೆಯಲಾಗುವದು.
ಸಾರ್ವಜನಿಕರಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸಬೇಕು. ಅದನ್ನು ಬಿಟ್ಟು ಶೋಷಣೆ ಮಾಡುವದು ಸರಿಯಲ್ಲ. ಹೊರಗುತ್ತಿಗೆಯವರು ಪೌರ ಕಾರ್ಮಿಕರಿಂದಲೇ ಪ್ರತಿ ದಿನ 2,300 ರೂ. ಪಾವತಿ ಮಾಡುವಂತೆ ಶೋಷಣೆ ಮಾಡುವದು ಸರಿಯಲ್ಲ ಎಂದು ತಿಳಿಸಿದರು.
ಬಳಿಕ ಜಿಲ್ಲಾ ಆಸ್ಪತ್ರೆಗೆ ತೆರಳಿ ಅಲ್ಲಿನ ಸ್ವಚ್ಛತಾಗಾರರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು. ಪ್ರತೀ ತಿಂಗಳು ವೇತನ ನೀಡಲಾಗುತ್ತಿದೆ. ಪಿ.ಎಫ್. ಕಟಾವಣೆ ಮಾಡಲಾಗುತ್ತಿದೆ. ಇನ್ನಷ್ಟು ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಜೊತೆಗೆ ಊಟ ಮಾಡಲು ಸ್ಥಳಾವಕಾಶ ಕಲ್ಪಿಸಬೇಕಿದೆ ಎಂದು ಅಧ್ಯಕ್ಷರು ಹೇಳಿದರು.
ನಂತರ ನಗರದ ಕಾವೇರಿ ಕಲಾಕ್ಷೇತ್ರಕ್ಕೆ ಭೇಟಿ ನೀಡಿ ಪೌರಕಾರ್ಮಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಸಫಾಯಿ ಕರ್ಮಚಾರಿಗಳಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳನ್ನು ಬಳಸಿಕೊಳ್ಳಬೇಕು. ಸಫಾಯಿ ಕರ್ಮಚಾರಿಗಳು ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು. ಈ ಸಂದರ್ಭ ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಹಾಗೂ ಇತರರು ಇದ್ದರು.