ಮಡಿಕೇರಿ, ಮೇ 27: ‘ಮತದಾರರಿಂದ ಆಯ್ಕೆಗೊಂಡು ಜನಸೇವೆ ಮಾಡುವ ಕನಸಿನೊಂದಿಗೆ ಹೊರಗೆ ಬಂದಿರುವ ನಮಗೆ ಸರಕಾರದ ಅನುದಾನ ಲಭಿಸದೆ, ಯಾವ ಕೆಲಸವನ್ನು ಮಾಡಿಕೊಡಲಾರದೆ, ಇಂದು ಜನರಿಗೂ ಮುಖ ತೋರಲಾರದ ಪರಿಸ್ಥಿತಿ ಎದುರಾಗಿದೆ’ ನಮ್ಮ ಕಷ್ಟ ಯಾರ ಬಳಿ ಹೇಳಿಕೊಳ್ಳಬೇಕು ತಿಳಿಯದಾಗಿದೆ.., ಹೀಗೆಂದು ಅನೇಕ ಗ್ರಾ.ಪಂ., ತಾ.ಪಂ., ಜಿ.ಪಂ. ಪ್ರತಿನಿಧಿಗಳು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಸರಕಾರ ಬೊಗಳೆ: ಒಂದು ಅಂದಾಜಿನಂತೆ ಅಭಿವೃದ್ಧಿ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ನಮ್ಮ ಸರಕಾರದ ಮಂತ್ರಿ ಮಾಗಧರು ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ ಬೊಗಳೆ ಬಿಡುತ್ತಿದ್ದಾರೆ ಎಂದು ಇವರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯಿತಿಗಳಿದ್ದು, ಯಾವ ಪಂಚಾಯಿತಿಗೂ ಪೂರ್ಣ ಸಮಯ ಕೊಡುವ ಅಭಿವೃದ್ಧಿ ಅಧಿಕಾರಿಯಿಲ್ಲ. ಕಚೇರಿ ನೌಕರರೇ ಇಲ್ಲ. ಅಲ್ಲಿನ ಜನಪ್ರತಿನಿಧಿಗಳನ್ನೂ ಕೇಳುವವರಿಲ್ಲ; ಈ 104 ಗ್ರಾ.ಪಂ.ಗಳನ್ನು ನೋಡಿಕೊಳ್ಳಲು ಕೇವಲ 56 ಮಂದಿ ಪಿಡಿಓ (ಅಭಿವೃದ್ಧಿ ಅಧಿಕಾರಿ)ಗಳಿದ್ದಾರಷ್ಟೆ.

ಸರಕಾರದ ಅನುದಾನ ಲಭಿಸದೆ, ಗ್ರಾ.ಪಂ. ಪ್ರತಿನಿಧಿಗಳಿಗೆ ಉತ್ತರಿಸಲಾರದೆ, ಸಾರ್ವಜನಿಕ ಬೇಕು-ಬೇಡಿಕೆಗಳಿಗೆ ಸ್ಪಂದಿಸಲಾರದೆ ಈ ಪಿಡಿಓಗಳು ಕೂಡ ಬೇರೆ ಬೇರೆ ಗ್ರಾ.ಪಂ.ಗಳ ಹೊಣೆ ಹೊತ್ತು ದಿಕ್ಕು ಕಾಣದೆ ಧೃತಿಗೆಟ್ಟಿದ್ದಾರೆ. ಗ್ರಾಮೀಣ ಜನತೆಯ ಪ್ರಕಾರ ಮಂತ್ರಿ ಮಾಗಧÀರು, ಸರಕಾರದ ಮೇಲಧಿಕಾರಿಗಳು ಹಳ್ಳಿ ಆಡಳಿತದೆಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲವೆಂದು ಅಸಮಾಧಾನದಿಂದ ನುಡಿಯುತ್ತಾರೆ.

ಹತ್ತಾರು ವರ್ಷಗಳಿಂದ ಡಾಮರು ಕಾಣದೆ ಗುಂಡಿ ಬಿದ್ದು ಮಳೆಯಿಂದ ಕೆಸರು ಹೊಂಡಗಳಿಂದ ಕೂಡಿದ ರಸ್ತೆಗಳು, ಕಸ ತೆಗೆದು ಹಾಕಲು ಜಾಗವಿಲ್ಲದೆ ಕಂಗೆಟ್ಟಿರುವ ನೌಕರರು, ಚುನಾವಣೆ ವೇಳೆ ಭರವಸೆಯ ಮಾತನಾಡಿ ಈಡೇರಿಸಲಾರದೆ ಪರಿತಪಿಸುತ್ತಿರುವ ಜನಪ್ರತಿನಿಧಿಗಳ ಮಾತು ಗಮನಿಸಿದರೆ, ಗ್ರಾಮೀಣ ಭಾರತದ ಪ್ರಗತಿ ಈ ಶತಮಾನಕ್ಕೆ ಕನಸಾಗಿಯೇ ಉಳಿದೀತು.

ಮಹಾತ್ಮಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು, ವಿಶ್ವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ’ದ ದೂರದೃಷ್ಟಿ ಯೋಜನೆಗಳು ದೇಶ ಹಾಗೂ ರಾಜ್ಯದ ರಾಜಧಾನಿಗಳಿಂದ ಗ್ರಾಮಗಳನ್ನು ತಲಪುವದು ಕೇವಲ ಘೋಷಣೆಗಳಿಗೆ ಸೀಮಿತವಾದೀತು ಎಂಬ ನೋವು ಹಳ್ಳಿಗಾಡಿನ ಮಂದಿಯಲ್ಲಿ ಮನೆಮಾಡಿದಂತಿದೆ.

ಉದಾಹರಣೆಯಷ್ಟೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಶನಿವಾರಸಂತೆ, ಸಿದ್ದಾಪುರ, ಕುಶಾಲನಗರ ಸೇರಿದಂತೆ ಜಿಲ್ಲೆಯ ಅನೇಕ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಹಾಗೂ ನೌಕರರ ಸಮಸ್ಯೆಯಿಂದ ಗ್ರಾಮೀಣ ಜನತೆ ಅನುಭವಿಸುತ್ತಿರುವ ತೊಂದರೆ ಇಲ್ಲಿ ಉದಾಹರಣೆಯಷ್ಟೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಇಂತಹ ಸಮಸ್ಯೆಗಳೊಂದಿಗೆ ಜನಪ್ರತಿನಿಧಿಗಳ ಅಸಹಾಯಕತೆ ಗೋಚರಿಸುತ್ತದೆ.

ಸ್ವಚ್ಛಭಾರತ ಎಲ್ಲಿ? ಜಿ.ಪಂ. ಸದಸ್ಯೆ ಸರೋಜಮ್ಮ ಅವರ ಪ್ರಕಾರ, ಶನಿವಾರಸಂತೆ ಸೇರಿದಂತೆ ಕೊಡಗಿನ ಅನೇಕ ಗ್ರಾ.ಪಂ.ಗಳಲ್ಲಿ ಕಸವಿಲೇವಾರಿಗೆ ವ್ಯವಸ್ಥೆ ಇಲ್ಲ. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳಿಲ್ಲ; ಶನಿವಾರಸಂತೆ ಶಾಲಾ-ಕಾಲೇಜಿಗೆ ಶೌಚಾಲಯ, ಕುಡಿಯಲು ನೀರು ಪೂರೈಕೆ ಸಮರ್ಪಕವಿಲ್ಲ. ಇನ್ನು ಸರಕಾರ ನೀಡಿರುವ ‘ಸ್ವಚ್ಛಭಾರತ ಪುರಸ್ಕಾರ’ ಯಾರಿಗೆ? ಎಂದು ನೋವಿನಿಂದ ಪ್ರಶ್ನಿಸುತ್ತಾರೆ.

ಡಿಸಿ ಆದೇಶಕ್ಕೂ ಸಮ್ಮತಿ ಇಲ್ಲ: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಕಸ ವಿಲೇವಾರಿಗೆಂದು ಜಿಲ್ಲಾಧಿಕಾರಿ ಎರಡು ಎಕರೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದರೂ, ಕವಡೆ ಕಿಮ್ಮತ್ತು ಬೆಲೆ ಇಲ್ಲವೆಂದು ಸರೋಜಮ್ಮ ವಿಷಾದಿಸುತ್ತಾರೆ.

ಒಂದೊಮ್ಮೆ ಪ್ರತಿಷ್ಠಿತ ಪುರಸಭೆಯಾಗಿದ್ದು, ಬಳಿಕ ಮಂಡಲ ಪಂಚಾಯಿತಿ ಹಾಗೂ ಪ್ರಸಕ್ತ ಗ್ರಾಮ ಪಂಚಾಯಿತಿ ಆಗಿರುವ ಶನಿವಾರಸಂತೆ ವ್ಯಾಪ್ತಿಯ ಜನಪ್ರತಿನಿಧಿಗಳು ಜನತೆಯ ಬೇಕು-ಬೇಡಿಕೆಗಳಿಗೆ ಸ್ಪಂದಿಸಲಾರದೆ ಸಿಡಿಮಿಡಿಗೊಂಡಿದ್ದಾರೆ.

ಶನಿವಾರಸಂತೆ ಪೇಟೆ ಮಧ್ಯೆ ಇರುವ ಗ್ರಾ.ಪಂ. ಕಚೇರಿಯ ಒಳ ಪ್ರವೇಶಿಸಿದರೆ ಹರಕಲು ಮೇಜು, ಮುರುಕಲು ಕುರ್ಚಿಗಳು, ಧೂಳು ಹಿಡಿದ ಓಬಿರಾಯನ ಕಟ್ಟಡದೊಂದಿಗೆ ಮುರಿದು ಹೋಗಿರುವ ಕಿಟಕಿ-ಬಾಗಿಲುಗಳು ಎದುರಾಗಲಿವೆ.

ಇಲ್ಲಿನ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ಸದಸ್ಯ ಸರ್ದಾರ್ ಪ್ರಕಾರ ಕಳೆದ ಮೂರು ವರ್ಷಗಳಿಂದ ಶನಿವಾರಸಂತೆ ಗ್ರಾ.ಪಂ.ಗೆ ಸರಕಾರದಿಂದ ನಯಾಪೈಸೆ ಅನುದಾನ ಬಂದಿಲ್ಲ! ಗ್ರಾ.ಪಂ. ತೆರಿಗೆಗಳು, ವಿದ್ಯುತ್ ಬಿಲ್, ನೌಕರರ ಸಂಬಳ, ಕಚೇರಿ ನಿರ್ವಹಣೆ ಇತ್ಯಾದಿಗೆ ಸರಿ ಹೊಂದಲಿದೆ.

ಬಹುತೇಕ ಪಿಡಿಓಗಳು ಒಂದು ಪಂಚಾಯಿತಿಯಲ್ಲಿ ವಿಚಾರಿಸಿದರೆ, ಇನ್ನೊಂದು ಪಂಚಾಯಿತಿಯ ಪ್ರಬಾರಿ ಕೆಲಸದಲ್ಲಿದ್ದೇನೆಂದು ಉತ್ತರಿಸುತ್ತಾರೆ. ಆ ಗ್ರಾ.ಪಂ.ನಲ್ಲಿ ವಿಚಾರಿಸಿದರೆ ಈ ಗ್ರಾ.ಪಂ.ನಡೆಗೆ ಬೊಟ್ಟು ಮಾಡುತ್ತಾ, ಉಭಯಕಡೆ ಸಿಗದಾಗಿದ್ದಾರೆ ಎಂಬದು ಜನಪ್ರತಿನಿಧಿಗಳ ಅಸಮಾಧಾನ.

ಇನ್ನೊಂದೆಡೆ ಜಿಲ್ಲಾಡಳಿತ ಕಸ ವಿಲೇವಾರಿಗಾಗಿ ಎರಡು ಎಕರೆ ಜಾಗ ಮಂಜೂರುಗೊಳಿಸಿ ಆದೇಶ ಹೊರಡಿಸಿದ್ದರೂ, ದುಂಡಳ್ಳಿ ಗ್ರಾ.ಪಂ. ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ನಾವು ಪಾಕಿಸ್ತಾನದವರೆ? ಎಂಬದು ಶನಿವಾರಸಂತೆ ಪ್ರತಿನಿಧಿಗಳ ನೋವಿನ ಪ್ರಶ್ನೆ.

ಕಿ.ಮೀ. ಅಂತರವಿಲ್ಲ: ಶನಿವಾರಸಂತೆ ಹಾಗೂ ದುಂಡಳ್ಳಿ ಗ್ರಾ.ಪಂ.ಗಳಿಗೆ ಕಿ.ಮೀ. ದೂರವೂ ಅಂತರವಿಲ್ಲ. ಪಟ್ಟಣ ಮಧ್ಯೆ ಹಾದುಹೋಗಿರುವ ಒಂದೇ ರಸ್ತೆಯ ಎಡಭಾಗ ಶನಿವಾರಸಂತೆ ಗ್ರಾ.ಪಂ. ಹಿಡಿತವಿದ್ದರೆ, ಬಲಭಾಗ ದುಂಡಳ್ಳಿ ಆಡಳಿತಕ್ಕೆ ಒಳಪಟ್ಟಿದೆ. ಹೀಗಿದ್ದು ರಾಜಕೀಯ ಮೇಲಾಟ, ಆರ್ಥಿಕ ಸ್ಥಿತಿ ಕುಂಠಿತಗೊಂಡು ಅಭಿವೃದ್ಧಿ ಕಷ್ಟಸಾಧ್ಯವಾಗಿದೆ.

ಕಾಡುಪಾಲು ಯೋಜನೆಗಳು: ನಾಲ್ಕಾರು ವರ್ಷಹಿಂದೆ ದುಂಡಳ್ಳಿ ಗ್ರಾ.ಪಂ. ಕಟ್ಟಡಕ್ಕೆ ಅಡಿಪಾಯ ಹಾಕಿದ್ದರೂ, ಬಳಿಕ ಹಣ ಬಿಡುಗಡೆಯಾಗದೆ ಕಾಮಗಾರಿ ನಿಂತುಹೋಗಿದೆ. ಪರಿಶಿಷ್ಟ ಜಾತಿ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಉಭಯ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ರೂ. 3 ಲಕ್ಷ ವ್ಯಯಿಸಿ ಕಟ್ಟಲು ಮುಂದಾಗಿದ್ದ ಸಮುದಾಯ ಭವನಗಳು ಅರ್ಧಕ್ಕೆ ಕೆಲಸ ನಿಂತು, ಕಾಡುಪಾಲಾಗಿವೆ.

ಸ್ಥಳೀಯ ಶಾಸಕರು ನೀಡುವ ಅಲ್ಪಸ್ವಲ್ಪ ಪಾಲು ಹಣ ಯಾವ ಕೆಲಸಕ್ಕೂ ಸಾಕಾಗುವದಿಲ್ಲ ಎನ್ನುವ ಗ್ರಾ.ಪಂ. ಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಮೀಣ ಭಾಗಕ್ಕೆ ಅಭಿವೃದ್ಧಿಗಾಗಿ ಪಂಚಾಯಿತಿ ಮೂಲಕ ವಿಶೇಷ ಅನುದಾನ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

-ಶ್ರೀಸುತ