ಶ್ರೀಮಂಗಲ, ಮೇ 27: ಸ್ವಚ್ಛತಾ ನಿಯಮ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಉಲ್ಲಂಘಿಸಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುವವರ ಮೇಲೆ ಮೊದಲ ಹಂತದಲ್ಲಿ ರೂ.5 ಸಾವಿರ ದಂಡ ವಿಧಿಸಿ, ನಂತರವೂ ನಿಯಮ ಉಲ್ಲಂಘನೆ ಕಂಡು ಬಂದರೆ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಜಿ.ಪಂ. ಸಿ.ಇ.ಒ ಚಾರುಲತಾ ಸೋಮಲ್ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮ ಪರಿಶೀಲನೆ ನಡೆಸಿ ಮಾತನಾಡಿದರು. ನಿಯಮ ಉಲ್ಲಂಘಿಸುವ ಪ್ರಕರಣದಲ್ಲಿ ಹೆಚ್ಚಿನ ದಂಡವನ್ನು ವಿಧಿಸಿ ಇದರಿಂದ ಗ್ರಾ.ಪಂ.ಗೂ ಆದಾಯವಾಗಲಿದೆ ಎಂದು ಸೂಚಿಸಿದರು.

ಈ ಸಂದರ್ಭ ಕುಟ್ಟ ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ಜಾಗದ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಕುಟ್ಟ ಗ್ರಾ.ಪಂ. ಕಚೇರಿಯ ಹಿಂಭಾಗದಲ್ಲಿರುವ ತ್ಯಾಜ್ಯ ಸಂಗ್ರಹವನ್ನು ದೊಡ್ಡ ಗುಂಡಿ ಮಾಡಿ ಮಣ್ಣಿನಲ್ಲಿ

(ಮೊದಲ ಪುಟದಿಂದ) ಹೂತು ಹಾಕಿ ಅದರ ಮೇಲೆ ಕೆಲವು ಅಡಿಯಷ್ಟು ಮಣ್ಣು ಹಾಕಿ ಹೂವಿನ ತೋಟ ನಿರ್ಮಾಣ ಮಾಡಿ ಸ್ವಚ್ಚ ಪರಿಸರ ಕಾಪಾಡುವಂತೆ ಸೂಚಿಸಿದರು. ಇದಕ್ಕೆ ತಗಲುವ ಅನುದಾನವನ್ನು ನರೇಗ ಯೋಜನೆಯಿಂದ ಒದಗಿಸುವ ಭರವಸೆ ನೀಡಿದರು. ಗ್ರಾ.ಪಂ.ನಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ 15 ಲಕ್ಷ ಅನುದಾನವಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಬಳಸಲು ಕ್ರಿಯಾ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ತೈಲ ಗ್ರಾಮದಲ್ಲಿ 2 ಏಕ್ರೆ ಜಾಗ ತ್ಯಾಜ್ಯ ವಿಲೇವಾರಿಗೆ ಗುರುತಿಸಲಾಗಿದೆ. ಆದರೆ ಇನ್ನು ಮಂಜೂರಾತಿ ಆಗದೆ ಇರುವ ಬಗ್ಗೆ ಸಿ.ಇ.ಒ ಅವರ ಗಮನಕ್ಕೆ ತಂದು ಮಂಜೂರಾತಿ ಪ್ರಕ್ರಿಯೆ ಶೀಘ್ರಗೊಳಿಸಿಕೊಡುವಂತೆ ಗ್ರಾ.ಪಂ.ನಿಂದ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭ ಕೊಳೆಯುವ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಕಾ ಘಟಕವನ್ನು ಅವರು ಪರಿಶೀಲಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಪ್ರಕಾಶ್ ಉತ್ತಪ್ಪ, ಪಿ.ಡಿ.ಓ ಬಲರಾಮ್, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಕೃಷ್ಣ, ಗ್ರಾ.ಪಂ. ಸದಸ್ಯರಾದ ರೋಶಿಲಿ, ಸುನಿತಾ, ವಿಜಯ, ರುಕ್ಮಿಣಿ, ಮಾರ ಮತ್ತಿತರರು ಹಾಜರಿದ್ದರು.