ಮಡಿಕೇರಿ, ಮೇ 26: ಮಡಿಕೇರಿ ನಗರದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಕೈಜೋಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಸಲಹೆ ಮಾಡಿದ್ದಾರೆ. ನಗರದ ನಗರಸಭೆ ಸಭಾಂಗಣದಲ್ಲಿ ಸದಸ್ಯರೊಂದಿಗೆ ಚರ್ಚಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಮಡಿಕೇರಿ ನಗರಕ್ಕೆ ಪ್ರಥಮ ಬಾರಿಗೆ ರೂ. 35 ಕೋಟಿ ಬಿಡುಗಡೆ ಮಾಡಿದ್ದಾರೆ. ಇದನ್ನು ನಗರದ ಎಲ್ಲಾ ಸದಸ್ಯರು ಅರ್ಥ ಮಾಡಿಕೊಳ್ಳಬೇಕು ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.
ಎಲ್ಲರೂ ಒಗ್ಗಟ್ಟಿನಿಂದ ನಗರ ಅಭಿವೃದ್ಧಿಗೆ ಮುಂದಾದಲ್ಲಿ ಇನ್ನೂ ರೂ. 50 ಕೋಟಿ ಬಿಡುಗಡೆ ಮಾಡಿಸಲಾಗುವದು. ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸದಸ್ಯರು ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ನಗರದ ಅಭಿವೃದ್ಧಿಗೆ ಒತ್ತು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ನಗರದಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ ಇತರ ಮೂಲ ಸೌಲಭ್ಯಗಳಿಗೆ ವಿಶೇಷ ಗಮನಹರಿಸಬೇಕಿದೆ. ಆ ನಿಟ್ಟಿನಲ್ಲಿ ಸದಸ್ಯರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಒಳಚರಂಡಿ ಕಾಮಗಾರಿಯನ್ನು ಹತ್ತು ದಿನದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್‍ಗೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.
ಈ ಸಂದರ್ಭ ಮಾತನಾಡಿದ ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಸದಸ್ಯ ಉನ್ನೀಕೃಷ್ಣ ರೂ. 35 ಕೋಟಿಯಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಗಾಗಿ ರೂ. 7 ಕೋಟಿ ಮೀಸಲಿಡಲಾಗಿದೆ. ಉಳಿದ ಹಣದಲ್ಲಿ ವಾರ್ಡ್‍ಗಳಲ್ಲಿ ತಡೆಗೋಡೆ ನಿರ್ಮಾಣ, ಚರಂಡಿ, ವಿದ್ಯುತ್, ರಸ್ತೆ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳುವದು ಕಷ್ಟಸಾಧ್ಯವಾಗಲಿದೆ ಎಂದು ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.
ಒಳಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ, ಕಾಮಗಾರಿ ಯಿಂದ ನಗರ ಜನತೆ ಓಡಾಡಲು ತುಂಬಾ ತೊಂದರೆಯಾಗಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸದಸ್ಯ ಕೆ.ಎಂ.ಬಿ. ಗಣೇಶ್ ಸಚಿವರ ಗಮನಕ್ಕೆ ತಂದರು.
ಮಡಿಕೇರಿ ನಗರ ಪ್ರವಾಸೋದ್ಯಮ ಕೇಂದ್ರವಾಗಿರು ವದರಿಂದ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಒಳಚರಂಡಿ ನಿರ್ಮಾಣ ಸಂಬಂಧ ನಾಲ್ಕು ಎಕರೆ ಜಾಗವನ್ನು ನಗರಸಭೆಗೆ ಒದಗಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಸಚಿವರು ಸೂಚನೆ ನೀಡಿದರು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಮಡಿಕೇರಿ ನಗರ ಅಭಿವೃದ್ಧಿಗೆ ಸಚಿವರು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವದು ಎಂದು ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು.