ಮಡಿಕೇರಿ, ಮೇ 26: ಕೊಡಗಿನ ಹಣ್ಣು-ಹಂಪಲುಗಳ ಪೈಕಿ ಕಾಡು ಮಾವು ಒಂದು ವಿಶೇಷತೆ. ಬಾಯಲ್ಲಿ ನೀರೂರಿಸುವ ವಿವಿಧ ಬಗೆಬಗೆಯ ಕಾಡು ಮಾವು ಕೊಡಗಿನಲ್ಲಿ ಕಾಣಸಿಗುತ್ತದೆ. ವಿವಿಧ ರೀತಿಯ ಪರಿಮಳ ಬೀರುವ ರಸಭರಿತ ಮಾವಿನ ಹಣ್ಣುಗಳು ಎಲ್ಲರಿಗೂ ಅಚ್ಚುಮೆಚ್ಚು. ಮಳೆಗಾಲಕ್ಕೆ ಇದನ್ನು ಉಪ್ಪಿಗೆ ಹಾಕಿ ಸಂಗ್ರಹಿಸಿಡುವವರೂ ಉಂಟು. ಈ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಮಾವಿನ ಹಣ್ಣುಗಳನ್ನು ತಂದು ಮಾರಾಟ ಮಾಡಿ ಕೆಲವರು ಒಂದಷ್ಟು ಹಣ ಸಂಪಾದಿಸುತ್ತಾರೆ. ಆದರೆ ಈ ಬಾರಿ ಕಾಡು ಮಾವಿನ ಫಸಲು ಜಿಲ್ಲೆಯಲ್ಲಿ ತೀರಾ ಕಡಿಮೆ ಎನ್ನಬಹುದು. ಅತ್ಯಂತ ವಿರಳವಾಗಿ ಫಸಲು ಇದೆ. ಬಹುತೇಕ ಕಡೆಗಳಲ್ಲಿ ಈ ಬಾರಿ ಫಸಲು ಬಂದಿಲ್ಲ. ವಾರ್ಷಿಕವಾಗಿ ಒಮ್ಮೆ ಹೆಚ್ಚು ಫಸಲಿದ್ದರೆ ಇನ್ನೊಂದು ವರ್ಷ ಇಲ್ಲದಿರುವದು ಸಹಜವಾದರೂ ಇತ್ತೀಚಿನ ವರ್ಷಗಳಲ್ಲಿ ಈ ಸಲವೇ ಕಡಿಮೆ ಫಸಲು ಕಂಡು ಬಂದಿದೆ ಎಂದು ಅನುಭವಸ್ಥರು ಹೇಳುತ್ತಾರೆ. ಇದರೊಂದಿಗೆ ಕೆಲ ಸಮಯದಿಂದೆ ಕಾಡು ಮಾವು ಮರ ಕಡಿತಲೆಗೆ ಅವಕಾಶ ಮಾಡಿಕೊಟ್ಟ ಪರಿಣಾಮ ಬೇರೆಲ್ಲೂ ಕಂಡು ಬಾರದ ಭಾರೀ ಗಾತ್ರದ ಕಾಡು ಮಾವಿನ ಮರಗಳು ಕಣ್ಮರೆಯಾಗಿವೆ. ಕಾಡು ಮಾವು ಮರ ಕಡಿತಲೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸರಕಾರ ಈ ಆದೇಶವನ್ನು ಹಿಂಪಡೆಯಿತಾದರೂ ಸಿಕ್ಕಿದ್ದ ಅಲ್ಪಾವಧಿಯ ಅವಕಾಶದಲ್ಲಿ ಸಾವಿರಾರು ಮರಗಳು ಧರಶಾಹಿಯಾಗಿ ಪರ ಜಿಲ್ಲೆ, ಪರ ರಾಜ್ಯದ ಮರ ವ್ಯಾಪಾರಿಗಳ ಬೊಕ್ಕಸ ಭರ್ತಿಯಾಗಿತ್ತು. ಕಾಡು ಮಾವು ಫಸಲು ಕಡಿಮೆಯಾಗಲು ಇದೂ ಒಂದು ಕಾರಣವೆನ್ನಬಹುದು. ಮಡಿಕೇರಿ ನಗರಕ್ಕೆ ಅಪರೂಪಕ್ಕೆ ಕೆಲವರು ಗ್ರಾಮೀಣ ಪ್ರದೇಶದಿಂದ ಮಾವಿನ ಹಣ್ಣು ತರುತ್ತಿದ್ದಾರೆ. ಬೆಲೆ ಈ ಬಾರಿ ಕೆ.ಜಿ.ಗೆ ರೂ. 80 ರಿಂದ ರೂ. 100 ರತನಕ ಹೆಚ್ಚಿದೆ.