ಮಡಿಕೇರಿ, ಮೇ 26: ರಾಜ್ಯ ಸರಕಾರದ ಆಡಳಿತ ವೈಖರಿ ತೀರಾ ಹದಗೆಟ್ಟಿದೆ. ಸರಕಾರದ ವೈಫಲ್ಯದಿಂದಾಗಿ ದೇಶದಲ್ಲಿ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನದಲ್ಲಿದ್ದು, ರಾಜ್ಯದ ಮಾನ ಹರಾಜಾಗುತ್ತಿದೆ. ಎಲ್ಲೆಲ್ಲೂ ಭ್ರಷ್ಟಾಚಾರವೇ ತುಂಬಿತುಳುಕುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರ ಯಾವದೇ ಕೆಲಸಗಳಾಗುತ್ತಿಲ್ಲ. ಜನತೆ ಈ ಬಗ್ಗೆ ಅಲೆದಾಡುವಂತಾಗಿದ್ದು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಂದ ಹಿಡಿದು ಬಹುತೇಕರು ಭ್ರಷ್ಟಾಚಾರದಲ್ಲಿ ತೊಡಗಿರುವದಾಗಿ ಶಾಸಕ ಕೆ.ಜಿ. ಬೋಪಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜನಾಂದೋಲನದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶುಕ್ರವಾರ (ಜೂ. 2) ಬಿಜೆಪಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕುರಿತು ಅವರು ಪ್ರಸ್ತಾಪಿಸಿದ್ದು, ಮಡಿಕೇರಿ ತಾಲೂಕು ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ನಗರದ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಬೋಪಯ್ಯ ಅವರು ಈ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿದರು.
ನರೇಂದ್ರ ಮೋದಿ ಸರಕಾರದ ಮೂರು ವರ್ಷದ ಸಾಧನೆಯಿಂದ ಭಾರತ ಪ್ರಪಂಚ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ, ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಕರ್ನಾಟಕ ಭ್ರಷ್ಟಾಚಾರದಲ್ಲಿ ಗುರುತಿಸಿಕೊಳ್ಳುವಂತಾಗಿರುವದು ವಿಷಾದ. ಸ್ವಚ್ಛ, ದಕ್ಷ, ಪ್ರಾಮಾಣಿಕ ಸರಕಾರ ನೀಡುವದಾಗಿ ಹೇಳಿದ್ದವರ ಸಾಧನೆ ಇದಾಗಿದೆ ಎಂದು ವ್ಯಂಗ್ಯವಾಡಿದ ಶಾಸಕರು ಪ್ರಾಮಾಣಿಕ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ. ಕೆ.ಎ.ಎಸ್. ಮಟ್ಟದ ಅಧಿಕಾರಿಗಳು
(ಮೊದಲ ಪುಟದಿಂದ) ಹಿರಿಯ ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ರೈತರ ಕೆಲಸಗಳು ಸಾಕಷ್ಟು ವಿಳಂಬವಾಗುತ್ತಿದ್ದು, ಜನರನ್ನು ಅಲೆದಾಡಿಸುತ್ತಿದ್ದಾರೆ. ಆದರೆ ಹೊರಗಿನಿಂದ ಬಂದು ಆಸ್ತಿ ಖರೀದಿಸಿದವರಿಗೆ ಎಲ್ಲಾ ದಾಖಲೆಗಳು ಅತ್ಯಂತ ತ್ವರಿತವಾಗಿ ಲಭ್ಯವಾಗುತ್ತಿದೆ ಎಂದು ಆಕ್ಷೇಪಿಸಿದ ಅವರು ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಆಗಿದ್ದಾಗ ಸರಕಾರವನ್ನು ನಡುಗಿಸುತ್ತಿದ್ದರು. ಆದರೆ ಕಂದಾಯ ಸಚಿವರಾದ ಮೇಲೆ ಇವರಿಗೆ ಏನಾಗಿದೆ ಎಂದು ಅರ್ಥವಾಗುತ್ತಿಲ್ಲ ಎಂದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಯಾರೂ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲೂ ಕರೆ ನೀಡಿದ ಬೋಪಯ್ಯ ಜೂ. 2ರಂದು ಇದನ್ನು ಪ್ರಶ್ನಿಸುವದಾಗಿ ತಿಳಿಸಿದರು. ಉಸ್ತುವಾರಿ ಸಚಿವರು ವೈಯಕ್ತಿಕವಾಗಿ ಒಳ್ಳೆಯವರು ಆದರೆ ಅವರು ಒಳ್ಳೆಯ ಆಡಳಿತ ನೀಡುತ್ತಿಲ್ಲ ಎಂದು ಟೀಕಿಸಿದರು. ಕಂದಾಯ ಇಲಾಖೆಯೊಂದಿಗೆ ಅರಣ್ಯ ಇಲಾಖೆಯಿಂದಲೂ ಸಮಸ್ಯೆ - ಅಡ್ಡಿ ಎದುರಾಗುತ್ತಿದೆ ಎಂದೂ ಅವರು ಆಕ್ಷೇಪಿಸಿದರು.
ಪಕ್ಷಕ್ಕೆ ಮುಂದೆ ಸವಾಲಿನ ದಿನಗಳು ಬರಲಿದ್ದು ಇದನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಅಭಿಪ್ರಾಯ ಭೇದಗಳು ಸಹಜ ಇದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ ಎಂದ ಅವರು ಕೇಂದ್ರ ಸರಕಾರದ ಸಾಧನೆಯನ್ನು ಜನರಿಗೆ ತಲಪಿಸುವಂತೆ ಕರೆ ನೀಡಿದರು.
ಪಕ್ಷದ ವೇದಿಕೆಯಲ್ಲಿ ಚರ್ಚಿಸಿ : ಸುನಿಲ್
ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶ ಸಾಕಷ್ಟು ಯೋಜನೆಗಳ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟಿಸಬೇಕು. ಟಿಕೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುವದು ಬೇಡ. ಇಂತಹವರು ಪಕ್ಷದ ವೇದಿಕೆಯಲ್ಲಿ ಬಂದು ಚರ್ಚಿಸಲಿ ಎಂದು ಹೇಳಿದರು.
ಮನು ಮುತ್ತಪ್ಪ ಸಿಡಿಮಿಡಿ
ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿರುವ ಮನು ಮುತ್ತಪ್ಪ ಅವರು ಮಾತನಾಡಿ, ಬಿಜೆಪಿ ಕೇವಲ ರಾಜಕಾರಣ ಮಾತ್ರ ಮಾಡುತ್ತಿಲ್ಲ. ಉತ್ತಮ ಆಡಳಿತದೊಂದಿಗೆ ಅಭಿವೃದ್ಧಿಯನ್ನೂ ಮಾಡುತ್ತಿದೆ. ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಪಾಲಿಬೆಟ್ಟ ಮತ್ತು ಸಂಪಾಜೆ ಗ್ರಾ.ಪಂ.ಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವದು ಇದಕ್ಕೆ ಸಾಕ್ಷಿ ಎಂದರು. ಮಡಿಕೇರಿ ತಾಲೂಕು ಬಿಜೆಪಿಯ ಭದ್ರಕೋಟೆ. ಇಲ್ಲಿನ ಸುಭದ್ರ ಸಂಘಟನೆ ಅಭದ್ರವಾಗಬಾರದು, ಪಕ್ಷದಲ್ಲಿ ಶಿಸ್ತು ಮುಖ್ಯ ಎಂದ ಅವರು ಅಧಿಕಾರ ಇದ್ದರೂ ಇಲ್ಲದಿದ್ದರೂ ಪಕ್ಷ ನಿಷ್ಠೆ ಹೊಂದಿರಬೇಕೆಂದರು.
ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡುವದು ಪತ್ರಿಕಾ ಹೇಳಿಕೆಗಳ ಮೂಲಕ ಹಾಗೂ ವ್ಯಾಟ್ಸಾಪ್ನಲ್ಲಿ ನಾವೇ ಮುಂದಿನ ಅಭ್ಯರ್ಥಿಗಳು ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ಕಿಡಿಕಾರಿದ ಅವರು ಯಾವ ಕಾರ್ಯಕಾರಿಣಿಯಲ್ಲೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಪಕ್ಷದಲ್ಲಿ ಶಿಸ್ತು ಮುಖ್ಯ ಇಂತಹವರನ್ನು ಜಿಲ್ಲೆ - ರಾಜ್ಯದ ನಾಯಕರು ಪರಿಗಣಿಸಬಾರದೆಂದರು.
ಕಾರ್ಯಕರ್ತರ ಪಕ್ಷ
ಬಿಜೆಪಿ ಕಾರ್ಯಕರ್ತರಿಂದ ತಯಾರಾದ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೂ ಉತ್ತಮ ಅವಕಾಶ ಸಿಗುವದು ಬಿ.ಜೆ.ಪಿ.ಯಿಂದ ಮಾತ್ರ ಎಂದರು. ಈ ಹಿಂದಿನ ಎಲ್ಲದಕ್ಕೆ ನಾವು ಜವಾಬ್ದಾರರಾಗಲು ಸಾಧ್ಯವಿಲ್ಲ. ಆದರೆ ಮುಂದಿನ ಎಲ್ಲದಕ್ಕೂ ನಾವು ಹೊಣೆಗಾರರಾಗಬೇಕಾಗುತ್ತದೆ ಎಂಬದನ್ನು ಅರಿತುಕೊಳ್ಳಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಪಕ್ಷದ ವಕ್ತಾರ ನಾಪಂಡ ರವಿ ಕಾಳಪ್ಪ, ಸುಬ್ರಮಣ್ಯ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಕಳಗಿ, ಡೀನ್ ಬೋಪಣ್ಣ ಹಾಜರಿದ್ದರು. ಭಾರತೀ ರಮೇಶ್ ಪ್ರಾರ್ಥಿಸಿ, ಡೀನ್ ಬೋಪಣ್ಣ ವಂದಿಸಿದರು.