ಸೋಮವಾರಪೇಟೆ, ಮೇ 27: ಜೂ. 5ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ 5 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಅಪ್ಪಚ್ಚು ರಂಜನ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 5ರಂದು ಬೆಳಿಗ್ಗೆ 8 ಗಂಟೆಗೆ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್ ಕೃಷ್ಣ ನೆರವೇರಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ನಾಡಧ್ವಜ, ತಾಲೂಕು ಅಧ್ಯಕ್ಷ ಜವರಪ್ಪ ಅವರು ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ ಎಂದರು.
9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮಂಗಳವಾದ್ಯ, ಕಳಸ, ಸ್ತಬ್ಧಚಿತ್ರಗಳು, ಗೊಂಬೆ ಕುಣಿತ, ಡೊಳ್ಳುಕುಣಿತ, ವೀರಗಾಸೆ, ಕೊಡಗಿನ ವಾಲಗ, ಸುಗ್ಗಿ ಕುಣಿತ, ಶಾಲಾ ಕಾಲೇಜುಗಳ ಸ್ತಬ್ಧ ಚಿತ್ರಗಳು ಸೇರಿದಂತೆ ಕನ್ನಡಾಭಿ ಮಾನಿಗಳು ಭಾಗವಹಿಸಲಿದ್ದಾರೆ. ಎಸ್‍ಜೆಎಂ ಬಾಲಿಕಾ ಪ್ರೌಢಶಾಲೆ ಯಿಂದ ಬಸವೇಶ್ವರ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ದೇವಸ್ಥಾನ ರಸ್ತೆ, ಬಸ್ ನಿಲ್ದಾಣ, ಕ್ಲಬ್ ರಸ್ತೆ, ವಿವೇಕಾನಂದ ವೃತ್ತದ ಮೂಲಕ ಸಾಗುವ ಮೆರವಣಿಗೆ ಸಮ್ಮೇಳನ ಸಭಾಂಗಣದಲ್ಲಿ ಸಮಾಪನಗೊಳ್ಳಲಿದೆ ಎಂದು ಶಾಸಕ ರಂಜನ್ ಮಾಹಿತಿ ನೀಡಿದರು.
ಸಮ್ಮೇಳನದ ಅಂಗವಾಗಿ ನಗರದಲ್ಲಿ ದಿ. ಹೆಚ್.ಡಿ. ಗುರುಲಿಂಗಪ್ಪ ನೆನಪಿನ ದ್ವಾರ, ದಿ. ಸುಮನ್ ಶೇಖರ್, ಎಂ.ಆರ್. ಅಶೋಕ್, ಸ್ವಾತಂತ್ರ್ಯ ಹೋರಾಟಗಾರ ಮಲ್ಲೇಗೌಡ, ಡಿ.ಸಿ. ಜಯರಾಂ ಅವರುಗಳ ಹೆಸರಿನಲ್ಲಿ ವಿವಿಧ ದ್ವಾರಗಳನ್ನು ನಿರ್ಮಿಸ ಲಾಗುವದು. ಸಮ್ಮೇಳನದ ಸಭಾಂಗಣದ ಬಳಿ ಪತ್ರಕರ್ತ ದಿ. ಸಿ.ಎನ್. ಸುನೀಲ್‍ಕುಮಾರ್ ಹೆಸರಿನಲ್ಲಿ ಪುಸ್ತಕ ಮಳಿಗೆ ಸ್ಥಾಪಿಸ ಲಾಗುವದು ಎಂದರು.
ಸಮ್ಮೇಳನದ ಸಭಾಂಗಣಕ್ಕೆ ಬಿ.ಟಿ. ಚನ್ನಯ್ಯ ಅವರ ಹೆಸರಿಡಲಾಗಿದ್ದು, ವೇದಿಕೆಗೆ ಗುರುಸಿದ್ಧ ಮಹಾ ಸ್ವಾಮೀಜಿಗಳ ನಾಮಕರಣ ಮಾಡಲಾಗಿದೆ. ಅಂದು ಪೂರ್ವಾಹ್ನ 11.30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ವಿಶ್ವೇಶ್ವರ ಸ್ವಾಮೀಜಿಗಳು ಸಾನ್ನಿಧ್ಯವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಸಾಪ ತಾಲೂಕು ಅಧ್ಯಕ್ಷ ಜವರಪ್ಪ ಮಾತನಾಡಿ, ಸಮ್ಮೇಳನವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ನಿಕಟಪೂರ್ವ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ, ಹಿರಿಯ ಸಾಹಿತಿ ಮಳಲಿ ವಸಂತ್‍ಕುಮಾರ್, ಉಸ್ತುವಾರಿ ಸಚಿವ ಸೀತಾರಾಂ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಂಸದ ಪ್ರತಾಪ್ ಸಿಂಹ, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಸೇರಿದಂತೆ ಇತರರು ಭಾಗವಹಿಸಲಿ ದ್ದಾರೆ ಎಂದರು.
ಮಧ್ಯಾಹ್ನ 2.15ಕ್ಕೆ ಎಂ.ಜೆ. ಅಣ್ಣಮ್ಮ ಅಧ್ಯಕ್ಷತೆಯಲ್ಲಿ ವಿವಿಧ ವಿಚಾರಗೋಷ್ಠಿ, 3.15ಕ್ಕೆ ಸಾಹಿತಿ ನ.ಲ. ವಿಜಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಸಂಜೆ 4 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದೆ. 4. 30ಕ್ಕೆ ಸನ್ಮಾನ ಸಮಾರಂಭ ನಡೆಯಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಕ್ರೀಡಾಕ್ಷೇತ್ರ ಅರ್ಜುನ್ ಹಾಲಪ್ಪ,ವೈದ್ಯಕೀಯ ಕ್ಷೇತ್ರದಲ್ಲಿ ಶರ್ಮಿಳಾ ಫರ್ನಾಂಡೀಸ್, ಸಮಾಜ ಸೇವೆಯಲ್ಲಿ ಬಿ.ಎಂ. ಮಲ್ಲಯ್ಯ, ಜಯಪ್ಪ ಹಾನಗಲ್ಲು, ಗಂಗಾಧರ್ ಮಾಲಂಬಿ, ಯುವ ಪ್ರತಿಭೆ ಕ್ಷೇತ್ರದಿಂದ ದರ್ಶನ್ ಸಾಗರ್ ಅವರು ಗಳನ್ನು ಸನ್ಮಾನಿಸಲಾಗುವದು ಎಂದರು.
ಸಂಗೀತ ಕ್ಷೇತ್ರದಲ್ಲಿ ಸಂಧ್ಯಾ ರಾಂಪ್ರಸಾದ್, ಜನಪದ ಕ್ಷೇತ್ರದಲ್ಲಿ ಎಸ್.ಪಿ. ಮಾಚಯ್ಯ, ನಾಪಂಡ ಚಿಣ್ಣಪ್ಪ, ಕಲೆ ಮತ್ತು ಸಂಸ್ಕøತಿ ಕ್ಷೇತ್ರದಿಂದ ಗೌರಿ, ಕೃಷಿ ಕ್ಷೇತ್ರದಿಂದ ಹೊಯ್ಸಳ, ಪತ್ರಿಕೋದ್ಯಮ ಕ್ಷೇತ್ರದಿಂದ ನರೇಶ್ಚಂದ್ರ, ಪೌರಕಾರ್ಮಿಕರ ಕ್ಷೇತ್ರದಿಂದ ಕಾಳಮ್ಮ, ಶಿಕ್ಷಣ ಕ್ಷೇತ್ರದಿಂದ ಬಿ.ಬಿ. ವೀರಭದ್ರಪ್ಪ, ಜಲಜಾ ಶೇಖರ್ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಮಾಹಿತಿ ನೀಡಿದರು.
ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ದೂರದರ್ಶನ ಕೇಂದ್ರದ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ, ಶಾಸಕ ರಂಜನ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಕಸಾಪ ಸ್ಥಾಪಕ ಅಧ್ಯಕ್ಷ ಪರಮೇಶ್ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಭಾಗವಹಿಸಲಿದ್ದಾರೆ. 6.30ರ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಹಣಕಾಸು ಸಮಿತಿ ಸಂಚಾಲಕ ಎ.ಎಸ್. ಮಲ್ಲೇಶ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಜೆ.ಸಿ. ಶೇಖರ್, ಕಸಾಪ ಗೌರವ ಕಾರ್ಯದರ್ಶಿ ರಾಣಿ ರವೀಂದ್ರ, ಎಸ್.ಬಿ. ವಿಜೇತ್ ಅವರುಗಳು ಉಪಸ್ಥಿತರಿದ್ದರು.