ಸುಂಟಿಕೊಪ್ಪ, ಮೇ 26: ಕರಿಮೆಣಸು ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಬೆಳ್ಳಂಬೆಳಗ್ಗೆ ಧಾಳಿ ನಡೆಸಿದ ಕಾಡಾನೆ ಆತನನ್ನು ಎಳೆದೊಯ್ದು ಕಣದಲ್ಲಿ ಜಾಲಾಡಿಸಿ, ಸೊಂಡಿಲಿನಿಂದ ಎಸೆದು, ಕಾಲಿನಿಂದ ಒದ್ದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ ನಾಕೂರು ಶಿರಂಗಾಲ ಗ್ರಾಮದ ಗೀತಾ ನರೇಂದ್ರ ಎಂಬವರಿಗೆ ಸೇರಿದ ಪನ್ಯ ತೋಟದಲ್ಲಿ ಇಂದು ಬೆಳಿಗ್ಗೆ 4 ಗಂಟೆಗೆ ಬಂದ ಒಂಟಿ ಸಲಗ ತೋಟದ ಗೇಟನ್ನು ಮುರಿದು ಒಳನುಗ್ಗಿ ಬಂದು .ಕಾಫಿ ಕಣದ ಮುಖ್ಯ ಗೇಟನ್ನು ಮುರಿದು ಕಾಡಾನೆಯೊಂದು ಪ್ರವೇಶಿಸಿದೆ. ಕರಿಮೆಣಸು ಕಾವಲು ಕಾಯುತ್ತಿದ್ದ ದಾವಣಗೆರೆಯ ದೇವನಾಯಕ ಎಂಬವರ ಪುತ್ರ ರವಿ (18) ಹಾಗೂ ಸಹೋದರ ಶಂಕರ (28) ಅವರುಗಳು ತೋಟದ ತೆರೆದ ಶೆಡ್ನಲ್ಲಿ ಮಲಗಿದ್ದರು. ಕಾಡಾನೆ ಮಾನವನ ವಾಸನೆಯನ್ನು ಗ್ರಹಿಸಿ ಮಲಗಿದ್ದ ರವಿಯನ್ನು ಸೊಂಡಿಲಿನಿಂದ ಎಳೆಯಲು ಮುಂದಾದಾಗ ಹೇಗೋ ತಪ್ಪಿಸಿಕೊಂಡು ಕಾಫಿ ಕಣದ ಮೂಲಕ ಓಡಲು ಮುಂದಾದಾಗ ಬೆನ್ನಟ್ಟಿದ ಕಾಡಾನೆ ರವಿಯನ್ನು ಸೊಂಡಿಲಿನಿಂದ ಎತ್ತಿ ಸಾಗಲು ಮುಂದಾದಾಗ ಕಣದ ಟೈಲ್ಸ್ನಲ್ಲಿ ಆನೆ ಕಾಲುಜಾರಿ ಬಿದ್ದಿದೆ. ಈ ವೇಳೆ ಆಕ್ರೋಶಗೊಂಡ ಒಂಟಿ ಸಲಗ ಆತನನ್ನು ಎತ್ತಿಹಾಕಿ ಕಾಲಿನಿಂದ ತುಳಿದಿದೆ. ಪರಿಣಾಮ ಆತನ ತೊಡೆ ಮೂಳೆ ಪುಡಿಯಾಗಿದೆ. ಕಿವಿಯ ಒಂದು ಭಾಗವು ತುಂಡಾಗಿ ತೀವ್ರ ರಕ್ತ ಸ್ರಾವದಿಂದ ಬಿದ್ದಿದ್ದಾನೆ. ಇತ್ತ ಒಂಟಿ ಸಲಗ ಕಾಫಿ ತೋಟದೊಳಗೆ ಸಾಗಿದೆ. ರವಿ ಜೊತೆ ಮಲಗಿದ್ದ ಶಂಕರ ಮತ್ತೊಂದು ಕಡೆಯಿಂದ ತಪ್ಪಿಸಿಕೊಂಡು ಹೋಗಿದ್ದರಿಂದ ಆತ ಬಚಾವಾಗಿದ್ದಾನೆ ಎಂದು ತೋಟದ ರೈಟರ್ ಕರುಂಬಯ್ಯ ಮಾಹಿತಿ ನೀಡಿದರು.
ಗಂಭೀರ ಗಾಯಗೊಂಡ ರವಿಯನ್ನು ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಶ್ವತ ಪರಿಹಾರ ನೀಡಲಿ
ಸರಕಾರ ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರ ನೀಡಬೇಕು ಪ್ರತಿನಿತ್ಯ ನಮ್ಮ ಗ್ರಾಮದಲ್ಲಿ ರಾತ್ರಿವೇಳೆ ಕಾಡಾನೆ ತೋಟಕ್ಕೆ ಪ್ರವೇಶಿ ಸುತ್ತಿದೆ. ಜನರು ಆತಂಕದಲ್ಲಿದ್ದಾರೆ. ಕಾಡಾನೆ ಧಾಳಿಯಿಂದ ಸತ್ತವರಿಗೆ ಕೇವಲ 5 ಲಕ್ಷ ಪರಿಹಾರ ನೀಡಿ ಕೈತೊಳೆದುಕೊಳ್ಳುವದು. ಸರಿಯಲ್ಲ 1 ಕೋಟಿ ರೂ ವೆಚ್ಚಮಾಡಿ ಸೋಲಾರ್ ಬೇಲಿ ನಿರ್ಮಿಸಿ ಶಾಶ್ವತವಾಗಿ ಕಾಡಾನೆ ನಾಡಿಗೆ ಬರದಂತೆ ತಡೆಗಟ್ಟಬೇಕು ಎಂದು ಗ್ರಾ.ಪಂ. ಸದಸ್ಯ ಕೆ.ಪಿ. ವಸಂತ ಕುಮಾರ್ ಹೇಳಿದರು.
ಪರಿಹಾರ ಬೇಕು: ಕಾಡಾನೆ ನಮ್ಮ ಗ್ರಾಮದಲ್ಲಿ ಪ್ರತಿನಿತ್ಯ ರಾತ್ರಿವೇಳೆ ಬರುತ್ತಿದೆ. ಹಗಲು ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಹೆದರುತ್ತಿದ್ದಾರೆ. ನಮ್ಮ ತೋಟದ 2ಗೇಟು ಮುರಿದು ಒಳನುಗ್ಗಿದ ಕಾಡಾನೆ ಕಣದ ತಡೆಗೋಡೆಯನ್ನು ಧ್ವಂಸಗೊಳಿಸಿದೆ, ಕನಿಷ್ಠ 1.5 ಲಕ್ಷ ನಷ್ಟವಾಗಿದೆ. ಅರಣ್ಯ ಇಲಾಖೆ ನಮಗೆ ಪರಿಹಾರ ನೀಡಬೇಕೆಂದು ಶಿರಂಗಾಲ ಬಿ.ತೋಟದ ರೈಟರ್ ಕೆ.ಎಸ್.ಕಾವೇರಪ್ಪ ಆಗ್ರಹಿಸಿದ್ದಾರೆ.