*ಗೋಣಿಕೊಪ್ಪಲು, ಮೇ 26: ಈಚೂರು ಲಕ್ಷ್ಮಿನರಸಿಂಹ ದೇವಸ್ಥಾನದ ಸಮುದಾಯ ಭವನಕ್ಕೆ ಸರಕಾರದಿಂದ ರೂ. 3 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರೂ, ಜಿಲ್ಲಾಧಿಕಾರಿಗಳು ಇಲ್ಲದ ಕಾನೂನನ್ನು ತಂದು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಅಡ್ಡಪಡಿಸುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು, ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಆರೋಪಿಸಿದ್ದಾರೆ.
2016ರಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ ಶಿಫಾರಸ್ಸಿನ ಮೇರೆ, ಕೇಂದ್ರದ ಮಂತ್ರಿ ವೆಂಕಯ್ಯನಾಯ್ಡು ಅವರ ರಾಜ್ಯ ಸಭಾ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಿಂದ ರೂ. 3 ಲಕ್ಷ ಬಿಡುಗಡೆಯಾಗಿದೆ. ಆದರೆ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ಅಭಿಪ್ರಾಯ ಕೋರಿ ಇದು ಅರಣ್ಯ ಪ್ರದೇಶ ಎಂದು ಹೇಳುತ್ತಿದ್ದಾರೆ. ಅರಣ್ಯ ಇಲಾಖೆಯೇ ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬಹುದೆಂದು ಪತ್ರ ವ್ಯವಹಾರ ನಡೆಸಿದೆ. ಆದರೂ ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೇವಸ್ಥಾನ ಅಧ್ಯಕ್ಷ ಎ.ಕೆ. ಗಣಪೆಮ್ಮಯ್ಯ ಆರೋಪಿಸಿದ್ದಾರೆ. ಅಧಿಕಾರಿಗಳು ಸರಕಾರದ ಸುತ್ತೋಲೆ ಯನ್ನು ಅರ್ಥೈಸಿಕೊಂಡು, ಸಾರ್ವಜನಿಕರಿಗೆ ತೊಂದರೆಯಾಗ ದಂತೆ ವರ್ತಿಸಬೇಕು ಎಂದು ಅವರು ಕೋರಿದರು. ಒಂದು ವಾರದ ಒಳಗೆ ಸಮುದಾಯ ಭವನದ ಅನುದಾನ ಬಿಡುಗಡೆಗೊಳಿಸದಿದ್ದರೆ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವದಾಗಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಸಿ.ಆರ್. ಸುಬ್ರಮಣಿ, ಕಾರ್ಯದರ್ಶಿ ಹ್ಯಾರಿ ಉಪಸ್ಥಿತರಿದ್ದರು.