ಗೋಣಿಕೊಪ್ಪಲು, ಮೇ 26: ಆರ್ಕಾ ಸೂಕ್ಷ್ಮಾಣುಜೀವಿಗಳ ಸಮೂಹ ತಂತ್ರಜ್ಞಾನವನ್ನು ಬೆಳೆಗಾರರು ಕಡ್ಡಾಯವಾಗಿ ಕೃಷಿಯಲ್ಲಿ ಬಳಸಲು ಮುಂದಾಗಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗಣೇಶ್ ಮೂರ್ತಿ ಸಲಹೆ ನೀಡಿದರು.
ನಲ್ಲೂರು ಗ್ರಾಮದ ಮಾದರಿ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ, ಕಾಳುಮೆಣಸು ಬಳ್ಳಿಗೆ ಬಳಸುತ್ತಿರುವ ಆರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ತಂತ್ರಜ್ಞಾನದ ಬಳಕೆಯ ಬಗ್ಗೆ ಮಾತನಾಡಿದರು. ಸಮೂಹ ತಂತ್ರಜ್ಞಾನವನ್ನು ತರಕಾರಿ ಬೆಳೆಗಳಿಗೆ ಬಳಕೆ ಮಾಡಲು ಸಂಶೋಧನೆ ಮೂಲಕ ಕಂಡು ಹಿಡಿದಿದ್ದು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರವು ಸ್ಥಳೀಯ ಬೆಳೆಗಳಿಗೆ ಉಪಯುಕ್ತವಾಗುವಂತೆ ರೈತರಿಗೆ ನೀಡುತ್ತಿರುವದು ಉತ್ತಮ ಬೆಳೆವಣಿಗೆ ಎಂದರು. ಈ ಸಂದರ್ಭ ಕೃಷಿಕ ಬೆಳೆದ ತರಕಾರಿ ಬೆಳೆ ಹಾಗೂ ಅಭಿವೃದ್ಧಿಯ ಬಗ್ಗೆ ಫೋಟೋ ಗ್ಯಾಲರಿ ಮೂಲಕ ಪ್ರಾತ್ಯಕ್ಷಿಕೆ ನಡೆಸಲಾಯಿತು. ಗೋ ಸಾಕಾಣಿಕೆ, ಕೋಳಿ ಸಾಕಾಣಿಕೆ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಈ ಸಂದರ್ಭ ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್, ವಿಜ್ಞಾನಿಗಳಾದ ವೀರೇಂದ್ರ ಕುಮಾರ್, ಡಾ. ಪ್ರಭಾಕರ್, ದೇವಯ್ಯ ಹಾಗೂ ಡಾ. ಸಕ್ಸೇನಾ ಉಪಸ್ಥಿತರಿದ್ದರು.