ಮೂರ್ನಾಡು, ಮೇ 26: ಕೊಡಗು ಕೆಂಬಟ್ಟಿ ಜನಾಂಗದ ಕ್ರೀಡಾಕೂಟದಲ್ಲಿ ಜೋಡುಬೀಟಿ ತಂಡ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡರು.ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಜನಾಂಗ ಬಾಂಧವರ ನಡುವೆ ನಡೆದ ವಾಲಿಬಾಲ್ ಅಂತಿಮ ಪಂದ್ಯದಲ್ಲಿ ಜೋಡುಬೀಟಿ ತಂಡವು ಅರಮೇರಿ ತಂಡವನ್ನು ಸೋಲಿಸಿ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು. ಅರಮೇರಿ ತಂಡ ರನರ್ಸ್ ಪ್ರಶಸ್ತಿಗೆ ಭಾಜನವಾಯಿತು. ಮಹಿಳೆಯ ಥ್ರೋಬಾಲ್ ಪಂದ್ಯದಲ್ಲಿ ಜೋಡುಬೀಟಿ ಹಾಗೂ ಬಾವಲಿ ತಂಡವು ಫೈನಲ್ ಪ್ರವೇಶಿಸಿ ಜೋಡುಬೀಟಿ ತಂಡ ಪಂದ್ಯ ಗೆದ್ದುಕೊಂಡು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಬಾವಲಿ ತಂಡವು ರನ್ನರ್ಸ್‍ಗೆ ತೃಪ್ತಿಪಟ್ಟು ಕೊಂಡಿತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕಿ ಡಾ. ರಾಧಿಕ ಮಾತನಾಡಿ ಕೊಡಗಿನ ಮೂಲ ನಿವಾಸಿಗಳಲ್ಲಿ ಕೆಂಬಟ್ಟಿ ಜನಾಂಗವೂ ಸೇರುತ್ತದೆ. ಜನಾಂಗ ಬಾಂಧವರು ಒಂದುಗೂಡಿ ಒಗ್ಗಟ್ಟು ಮೂಡಿಸುವಲ್ಲಿ ಇಂತಹ ) ಕ್ರೀಡಾಕೂಟ ಸಹಕಾರಿ ಆಗಿದೆ. ಇಂತಹ ಕ್ರೀಡಾಕೂಟಕ್ಕೆ ಜನಾಂಗದ ಪ್ರತಿಯೊಬ್ಬರು ಸಹಕಾರ ನೀಡಬೇಕು. ಆಗ ಜನಾಂಗದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪೋಷಕರು ಮಕ್ಕಳ ವಿದ್ಯೆಯತ್ತ ಗಮನ ಹರಿಸುವಂತೆ ಕರೆನೀಡಿದರು. ನಿವೃತ್ತ ಸೈನಿಕ ಬಿಲ್ಲರಿಕುಟ್ಟಂಡ ಪ್ರಭು ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಡಂಗ ಗ್ರಾಮ ಪಂಚಾಯಿತಿ ಸದಸ್ಯ ಯು.ಎ. ಪ್ರಕಾಶ್, ಪಾರಾಣೆ ಸುರೇಶ್, ರೋಹಿಣಿ, ದೇವಯ್ಯ, ಬಾಬಣಿ, ಹರೀಶ್ ಕುಟ್ಟಯ್ಯ, ಕಿಶೋರ್ ಪೂವಯ್ಯ, ಪಟ್ಟು ನಾಣಯ್ಯ, ಬೆಳ್ಯಪ್ಪ ಇತರರು ಹಾಜರಿದ್ದರು.