ಮಡಿಕೇರಿ, ಮೇ 26: ಡಾ. ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿ ಕೊಡಗಿನ ಜನರನ್ನು ವಂಚಿಸಿದೆಯೆಂದು ಆರೋಪಿಸಿರುವ ಸಿಪಿಐಎಂ ಪಕ್ಷದ ಜಿಲ್ಲಾ ಘಟಕ, ‘ಬಿಜೆಪಿ ಅಂದು ಹೇಳಿದ್ದೇನು-ಇಂದು ಮಾಡಿದ್ದೇನು?’ ಎನ್ನುವ ಘೋಷ ವಾಕ್ಯದೊಂದಿಗೆ ವರದಿಗೆ ಒಳಪಡುವ 55 ಗ್ರಾಮಗಳಲ್ಲಿ ಜಾಗೃತಿ ಜಾಥಾವನ್ನು ಆರಂಭಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಡಾ. ಇ.ರಾ. ದುರ್ಗಾಪ್ರಸಾದ್, ಅಧಿಕಾರಕ್ಕೆ ಬಂದರೆ ಕೊಡಗನ್ನು ಡಾ. ಕಸ್ತೂರಿ ರಂಗನ್ ವರದಿಯಿಂದ ಮುಕ್ತಗೊಳಿಸುವದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಕೇಂದ್ರದಲ್ಲಿ ಎನ್‍ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳೇ ಕಳೆದಿದ್ದರೂ ವರದಿಯ ಆತಂಕ ಇನ್ನೂ ಕೂಡ ಕೊಡಗನ್ನು ಕಾಡುತ್ತಲೆ ಇದೆ. ಇದಕ್ಕೆ ಬಿಜೆಪಿಯ ವಂಚನೆಯೇ ಕಾರಣವೆಂದು ಆರೋಪಿಸಿದರು. ತಾ. 25 ರಿಂದ ಸಂಪಾಜೆ ಗ್ರಾಮದಿಂದ ಸಿಪಿಐಎಂ ಜಾಗೃತಿ ಜಾಥಾವನ್ನು ಆರಂಭಿಸಿದೆ. ವರದಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸಿ ವರದಿಯ ಸಾಧಕ-ಬಾಧಕಗಳ ಬಗ್ಗೆ ಪ್ರಮುಖ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ವಹಿಸಿರುವದನ್ನು ಜನರಿಗೆ ಮನವರಿಕೆ ಮಾಡಿಕೊಡುವದಾಗಿ ತಿಳಿಸಿದರು.
ತಾ. 30 ರಂದು ಪ್ರತಿಭಟನೆ
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ತಾ. 30 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ಪ್ರತಿಭಟನೆ ನಡೆಸಲು ಸಿಪಿಐಎಂ ಪಕ್ಷ ನಿರ್ಧರಿಸಿದೆ ಎಂದು ದುರ್ಗಾಪ್ರಸಾದ್ ಇದೇ ಸಂದರ್ಭ ತಿಳಿಸಿದರು. ಗೊಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎ.ಸಿ. ಸಾಬು ಹಾಗೂ ವೈ.ಕೆ. ಗಣೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಡಾ. ದುರ್ಗಾ ಪ್ರಸಾದ್ ಅವರು ಡಾ. ಕಸ್ತೂರಿ ರಂಗನ್ ವರದಿಯ ಕುರಿತು ಜನ ಜಾಗೃತಿ ಮೂಡಿಸುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.