ಕುಶಾಲನಗರ, ಮೇ 26: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಹಮ್ಮಿಕೊಂಡಿರುವ ಸ್ವಚ್ಛ ಕಾವೇರಿ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಸಭೆ ಕುಶಾಲನಗರದಲ್ಲಿ ನಡೆಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿಯಿಂದ ಕುಶಾಲನಗರದ ತನಕ ನಡೆಯಲಿರುವ ಮ್ಯಾರಥಾನ್ ಬಗ್ಗೆ ಚರ್ಚಿಸಲಾಯಿತು.
ಕುಶಾಲನಗರ ವ್ಯಾಪ್ತಿಯ 200 ಕ್ಕೂ ಅಧಿಕ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಅಧಿಕಾರಿಗಳು ಈ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದು ಕೈಗೊಳ್ಳಬೇಕಾದ ರೂಪುರೇಷೆಗಳ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯ ನಂಜುಂಡಸ್ವಾಮಿ ಮಾತನಾಡಿದರು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜಾಥಾಗೆ ಚಾಲನೆ ಸಂದರ್ಭ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಮಡಿಕೇರಿಯಲ್ಲಿ ಆರಂಭಗೊಳ್ಳುವ ಸ್ವಚ್ಛತಾ ನಡಿಗೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದ ಕಾವೇರಿ ನದಿ ತಟದ ಬಳಿ ಸಮಾರೋಪಗೊಳ್ಳಲಿದೆ. ಅಂದಾಜು 7 ಗಂಟೆಗಳ ಕಾಲ ಈ ನಡಿಗೆ ಸಾಗಲಿದ್ದು, ನಾಗರಿಕರಿಗೆ ಕಾವೇರಿ ನದಿ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವದು. ಜೊತೆಗೆ ಜಾಥಾದ ಸಂದರ್ಭ ಮಾರ್ಗ ಬದಿಯಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯ, ಆನೆಕಾಡು, ಅತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡ ಮರಗಳ ಬೀಜ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಚಂದ್ರಮೋಹನ್ ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಡಿ.ಆರ್. ಸೋಮಶೇಖರ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಪ್ರಮುಖರಾದ ನಿಡ್ಯಮಲೆ ದಿನೇಶ್, ಮಂಜುನಾಥ್, ಎಂ.ಡಿ. ಕೃಷ್ಣಪ್ಪ, ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಭಾಸ್ಕರ್ ನಾಯಕ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್, ಕಾರು ಚಾಲಕರು ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್. ರಾಮಚಂದ್ರ ಮತ್ತಿತರರು ಇದ್ದರು.