ಸೋಮವಾರಪೇಟೆ, ಮೇ 27: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಮಲ್ಲಳ್ಳಿ ಜಲಪಾತದ ಬಳಿ ಇದ್ದ ತಳ್ಳುವ ಗಾಡಿಯನ್ನು ಕಂದಾಯ ಪರಿವೀಕ್ಷಕರು ಜಖಂಗೊಳಿಸಿ ಆರ್ಥಿಕ ನಷ್ಟಪಡಿಸಿದ್ದಾರೆ ಎಂದು ಕುಮಾರಳ್ಳಿ ಗ್ರಾಮದ ಎಂ.ಎಸ್. ಗಣೇಶ್ ಎಂಬವರು ತಾಲೂಕು ತಹಶೀಲ್ದಾರ್ಗೆ ದೂರು ನೀಡಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಮಲ್ಲಳ್ಳಿ ಜಲಪಾತದ ಬಳಿ ತಳ್ಳುವ ಗಾಡಿ ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುವ ಮೂಲಕ ಜೀವನ ನಡೆಸುತ್ತಿದ್ದು, ಕಂದಾಯ ಪರಿವೀಕ್ಷಕರು ಗಾಡಿಯನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಇವರ ಸೂಚನೆಯಂತೆ ಗಾಡಿಯನ್ನು ಸ್ಥಳದಿಂದ ತೆರವುಗೊಳಿಸಿ ಕಾಡಿನ ತಪ್ಪಲಿನಲ್ಲಿ ಇರಿಸಲಾಗಿತ್ತು. ಈ ಗಾಡಿಯನ್ನು ಧ್ವಂಸಗೊಳಿಸಿರುವ ಅಧಿಕಾರಿಗಳು ರೂ. 20 ಸಾವಿರಕ್ಕೂ ಅಧಿಕ ನಷ್ಟಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವದರೊಂದಿಗೆ ನಷ್ಟವನ್ನು ಭರಿಸಿಕೊಡಬೇಕೆಂದು ಗಣೇಶ್ ಅವರು ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.