ನಾಪೋಕ್ಲು, ಮೇ 26: ಅನುಮತಿಗಿಂತ ಹೆಚ್ಚಿನ ಕಟ್ಟಡಗಳನ್ನು ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದ ಕಕ್ಕಬ್ಬೆಯ ತಾಮರಾ ರೆಸಾರ್ಟ್ನ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಿ ಕುಂಜಿಲ ಗ್ರಾಮ ಪಂಚಾಯಿತಿ ಆದೇಶ ಹೊರಡಿಸಿದೆ.ಈ ಹಿಂದೆ 8 ಸಾವಿರ ಚ.ಮೀ. ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣ ಮಾಡಲು ಪಂಚಾಯಿತಿ ಪರವಾನಗಿ ನೀಡಿದ್ದು, ತಾ. 20 ರಂದು ಸ್ಥಳ ಪರಿಶೀಲನೆ ಸಂದರ್ಭ ಅನುಮತಿ ರಹಿತವಾಗಿ 20 ಸಾವಿರ ಚ.ಮೀ. ವಿಸ್ತೀರ್ಣದಲ್ಲಿ ಕಟ್ಟಡಗಳನ್ನು ನಿರ್ಮಿಸಿರುವದನ್ನು ಪಂಚಾಯಿತಿ ಅಧಿಕಾರಿಗಳು ಕಂಡು ಹಿಡಿದಿದ್ದರು. ತಾಮರಾ ಸಂಸ್ಥೆಯವರು ಈ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವದಾಗಲಿ, ದಾಖಲಾತಿಗಳನ್ನು ಪಂಚಾಯಿತಿಗೆ ಸಲ್ಲಿಸಿಲ್ಲದ ಕಾರಣ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಿರುವದಾಗಿ ತಾ. 22 ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಚಿನ್ ಲಿಖಿತ ಆದೇಶ ನೀಡಿದ್ದಾರೆ.
ತಕ್ಷಣದಿಂದಲೇ ವಹಿವಾಟನ್ನು ಸ್ಥಗಿತಗೊಳಿಸಬೇಕು ಹಾಗೂ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳ್ನು 15 ದಿನಗಳೊಳಗಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಅಂತಹ ಕಟ್ಟಡಗಳನ್ನು ಪಂಚಾಯಿತಿ ವತಿಯಿಂದಲೇ ತೆರವುಗೊಳಿಸಿ ಅದರ ವೆಚ್ಚವನ್ನು ಸಂಸ್ಥೆಯಿಂದಲೇ ಭರಿಸುವದಾಗಿ ಎಚ್ಚರಿಸಿದ್ದಾರೆ.