ಸೋಮವಾರಪೇಟೆ, ಮೇ 27: ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಪ.ಪಂ. ಆಡಳಿತ ಮಂಡಳಿ ವಿಫಲವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಜಯಕರ್ನಾಟಕ ಸಂಘಟನೆ ಎಚ್ಚರಿಕೆ ನೀಡಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ತ್ಯಾಜ್ಯ ಸಮಸ್ಯೆ ಬಿಗಡಾಯಿಸಿದ್ದು, ಜನಸಾಮಾನ್ಯರು ಪರಿತಪಿಸುವಂತಾಗಿದೆ ಎಂದು ಆರೋಪಿಸಿದರು.

ಪಟ್ಟಣ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಪಂಚಾಯಿತಿ ಹಲವು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಕಾಡುತ್ತಿದ್ದರೂ, ಈವರೆಗೆ ಸೂಕ್ತ ಸ್ಥಳ ಗುರುತಿಸಲು ವಿಫಲವಾಗಿದೆ ಎಂದು ಆರೋಪಿಸಿದರು. ಪಟ್ಟಣದಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಕಾಡುತ್ತಿದ್ದು, ಅದನ್ನು ಸಂಗ್ರಹಿಸಿ ಪಟ್ಟಣದ ಹಲವೆಡೆಗಳಲ್ಲಿ ಸುಡುತ್ತಿರುವದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸಿ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದರು.

ಜೇಸಿ ವೇದಿಕೆಯ ಮುಂಭಾಗ ಮೊದಲ ಅಂತಸ್ತಿನಲ್ಲಿ ಕಳೆದ 10 ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಸಭಾಂಗಣದ ಕಾಮಗಾರಿ ಇನ್ನೂ ಮುಗಿದಿಲ್ಲ. ಭವನಕ್ಕೆ ಹೋಗಲು ಮೆಟ್ಟಿಲಿನ ವ್ಯವಸ್ಥೆಯನ್ನೂ ಮಾಡದೆ ಹಾಗೇ ಬಿಡಲಾಗಿದೆ ಎಂದು ದೂರಿದರು.

ಇದರೊಂದಿಗೆ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಲಕ್ಷಾಂತರ ವೆಚ್ಛದಲ್ಲಿ ನಿರ್ಮಾಣ ಮಾಡಿರುವ ವಾಣಿಜ್ಯ ಮಳಿಗೆಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡದೇ, ಈಗಲೂ ಖಾಲಿ ಉಳಿದಿವೆ. ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ಪಂಚಾಯಿತಿಗೆ ಸಾಧ್ಯವಾಗದೆ ಇರುವದರಿಂದ ಆದಾಯವೂ ಕಡಿತವಾಗಿದೆ. ಇದಕ್ಕೆಲ್ಲ ಆಡಳಿತ ಮಂಡಳಿಯವರೇ ನೇರ ಕಾರಣಕರ್ತರಾಗಿದ್ದಾರೆ ಎಂದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ರೀಟಾ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಖಾಸಗಿ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಯನ್ನು ಟೆಂಡರ್ ಕರೆದು ರೂ. 12 ಸಾವಿರ ಬಾಡಿಗೆಗೆ ನೀಡಲಾಗಿತ್ತು. ಅದನ್ನು ಬಾಡಿಗೆಯಲ್ಲಿ ಪಡೆದವರು ಬೇರಾವದೋ ಕಾರಣ ನೀಡಿ ಪಂಚಾಯಿತಿಗೆ ಹಿಂದುರುಗಿಸಿದ್ದರು. ರೂ. 11,500ಕ್ಕೆ ನನ್ನ ಹೆಸರಿನಲ್ಲಿ ಟೆಂಡರ್ ಹಾಕಲಾಗಿದ್ದರೂ ಮಳಿಗೆ ಹಿಂದಿರುಗಿಸಿದವರನ್ನೇ ಕರೆದು ರೂ. 3 ಸಾವಿರಕ್ಕೆ ಬಾಡಿಗೆಗೆ ನೀಡುವ ಮೂಲಕ ಪಟ್ಟಣ ಪಂಚಾಯಿತಿ ಅಕ್ರಮವೆಸಗಿದೆ ಎಂದು ದೂರಿದರು.

ಗೋಷ್ಠಿಯಲ್ಲಿದ್ದ ಸಂಘಟನೆಯ ಉಪಾಧ್ಯಕ್ಷ ರಂಗ, ಕಾರ್ಯದರ್ಶಿ ರಫೀಕ್, ನಗರ ಘಟಕದ ಉಪಾಧ್ಯಕ್ಷ ಜನಾರ್ಧನ ಉಪಸ್ಥಿತರಿದ್ದರು.