ಸುಂಟಿಕೊಪ್ಪ, ಮೇ 26: ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 22ನೇ ವರ್ಷದ ರಾಜ್ಯಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಈಗಲ್ ಎಫ್.ಸಿ. ಬೆಂಗಳೂರು ಹಾಗೂ ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ತಂಡಗಳು ಜಯಗಳಿಸುವದರೊಂದಿಗೆ ಸೆಮಿಫೈನಲ್‍ಗೆ ಪ್ರವೇಶ ಪಡೆದವು.

ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆದ ಮೊದಲನೆ ಕ್ವಾರ್ಟರ್ ಪಂದ್ಯಾವಳಿಯು ಈಗಲ್ ಎಫ್.ಸಿ. ಬೆಂಗಳೂರು ಹಾಗೂ ಶೀತಲ್ ಎಫ್.ಸಿ. ಮೈಸೂರು ತಂಡಗಳ ನಡುವೆ ರೋಮಾಂಚನಕಾರಿ ಪಂದ್ಯಾಟ ನಡೆಯಿತು. ಮೊದಲಾರ್ಧದ ಹತ್ತನೇ ನಿಮಿಷದಲ್ಲಿ ಈಗಲ್ ಎಫ್.ಸಿ. ತಂಡದ ಮುನ್ನಡೆ ಸ್ಟಾಲಿನ್ ಶೀತಲ್ ತಂಡದ ಆಟಗಾರ ಕ್ಷೇತ್ರ ರಕ್ಷಕನನ್ನು ವಂಚಿಸಿ ಗೋಲುಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ನಂತರ ಎರಡು ತಂಡಗಳು ಸಮಬಲದ ಪ್ರದರ್ಶನ ನೀಡುವ ಮೂಲಕ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ಉತ್ತಮ ಕ್ರೀಡಾ ಮನರಂಜನೆ ನೀಡಿದರಲ್ಲದೆ ಮೈಸೂರು ಶೀತಲ್‍ಗೆ ದ್ವಿತೀಯಾರ್ಧದಲ್ಲಿ ಹಲವು ಉತ್ತಮ ಅವಕಾಶಗಳು ದೊರೆತರೂ ತಂಡದ ಕ್ರೀಡಾಪಟುಗಳು ಮಾತ್ರ ಗೋಲುಗಳಿಸುವಲ್ಲಿ ವೈಫÀಲ್ಯತೆ ಕಂಡ ಹಿನ್ನೆಲೆ ಈಗಲ್ ಎಫ್.ಸಿ. ಬೆಂಗಳೂರು ತಂಡವು 1-0 ಗೋಲಿನಿಂದ ಸೆಮಿಫೈನಲ್‍ಗೆ ಲಗ್ಗೆಯಿಟ್ಟಿತು.

ದ್ವಿತೀಯ ಪಂದ್ಯಾವಳಿಯು ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ಹಾಗೂ ಮೆರೆಡಿಯನ್ ಕಾಲೇಜು ಎಫ್.ಸಿ. ಉಳ್ಳಾಲ ತಂಡಗಳ ನಡುವೆ ನಡೆಯಿತು ಎರಡು ತಂಡಗಳಿಂದ ಉತ್ತಮ ಪ್ರದರ್ಶನ ಕಂಡು ಬಂದರೂ, ಕೋಸ್ಮಸ್ ಎಫ್.ಸಿ. ತಂಡದ ಮುನ್ನಡೆ ಆಟಗಾರ ನೌಶಿಫ್ 10ನೇ ನಿಮಿಷದಲ್ಲಿ ತನಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮೆರೆಡಿಯನ್ ಕಾಲೇಜು ಎಫ್.ಸಿ. ತಂಡದ ಕ್ಷೇತ್ರ ರಕ್ಷಕನನ್ನು ವಂಚಿಸುವ ಮೂಲಕ ಗೋಲುಗಳಿಸಿ ಮುನ್ನಡೆ ಒದಗಿಸಿದರು. ಪಂದ್ಯಾವಳಿಯು ಮುಂದುವರಿಯುತ್ತಿದ್ದಂತೆ 18ನೇ ನಿಮಿಷದಲ್ಲಿ ಕೋಸ್ಮಸ್ ಎಫ್.ಸಿ. ತಂಡದ ಮತ್ತೋರ್ವ ಮುನ್ನಡೆ ಆಟಗಾರ ಜಂಶೀದ್ ಗೋಲುಗಳಿಸುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಕೋಸ್ಮಸ್ ಎಫ್.ಸಿ. ತಂಡದ ಮತ್ತೋರ್ವ ಆಟಗಾರ ಮನೋಸ್ 22ನೇ ನಿಮಿಷದಲ್ಲಿ ಗೋಲು ಬಾರಿಸುವದರೊಂದಿಗೆ ಭಾರೀ ಮುನ್ನಡೆ ತಂದುಕೊಟ್ಟರು. ಇದರಿಂದ ಎದುರಾಳಿ ಉಳ್ಳಾಲ ತಂಡಕ್ಕೆ ಮತ್ತಷ್ಟು ಒತ್ತಡ ಎದುರಾಯಿತು.

ದ್ವಿತಿಯಾರ್ಧದಲ್ಲಿ ಒತ್ತಡ ಹಾಗೂ ಬಿರುಸಿನ ಆಟಕ್ಕೆ ಇಳಿದ ಉಳ್ಳಾಲ ತಂಡವು 15ನೇ ನಿಮಿಷದಲ್ಲಿ ಮುನ್ನಡೆ ಆಟಗಾರನಿಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶಾಹಿರ್ ಕೋಸ್ಮಸ್ ಎಫ್.ಸಿ. ತಂಡದ ಕ್ಷೇತ್ರರಕ್ಷಕನನ್ನು ವಂಚಿಸುವ ಮೂಲಕ ಗೋಲುಗಳಿಸಿ ತಂಡದ ಮೇಲಿದ್ದ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. ಆದರೆ ಎದುರಾಳಿ ತಂಡದವರು ಎಚ್ಚರಿಕೆಯ ಆಟವನ್ನು ಆಡುವ ಮೂಲಕ ತಂಡಕ್ಕೆ ಯಾವದೇ ಅಪಾಯವಾಗದಂತೆ ಅಂತರವನ್ನು ಕಾಯ್ದುಕೊಂಡರಲ್ಲದೆ ಪಂದ್ಯಾವಳಿಯನ್ನು 3-1 ಗೋಲುಗಳಿಂದ ಜಯಗಳಿಸುವ ಮೂಲಕ ಕೋಸ್ಮಸ್ ಎಫ್.ಸಿ. ಕ್ಯಾಲಿಕೆಟ್ ಸೆಮಿಫೈನಲ್‍ಗೆ ಲಗ್ಗೆಯಿಟ್ಟಿತು.

ಇಂದಿನ ಪಂದ್ಯಾವಳಿಗೆ ತಲೆಹೊರೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಮುತ್ತಯ್ಯ ಚಾಲನೆ ನೀಡಿದರು