ಸಿದ್ದಾಪುರ, ಮೇ 27: ಜಿಲ್ಲೆಯಲ್ಲಿ ಎಲ್ಲಾ ಮಳೆಗಾಲದಲ್ಲೂ ನದಿ ದಡದಲ್ಲಿ ಪ್ರವಾಹ ಉಂಟಾಗುವದು ಸಾಮಾನ್ಯವಾಗಿದ್ದು, ಕರಡಿಗೋಡು, ಗುಹ್ಯ ಗ್ರಾಮದ ನದಿ ದಡದ ಜನತೆ ವರ್ಷಂಪ್ರತಿ ಪ್ರವಾಹದಿಂದ ತತ್ತರಿಸಿ, ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವದು ಮಾಮೂಲಿ ಸಂಗತಿ. ಪ್ರವಾಹ ಕಡಿಮೆಯಾದ ಕೂಡಲೆ ಮತ್ತದೇ ಬದುಕಿಗೆ ಮರಳುವ ಬಡಪಾಯಿಗಳು ಮತ್ತೊಂದು ಮಳೆಗಾಲ ಬಂತೆಂದರೆ ಬದುಕಿಗೆ ಕಾರ್ಮೋಡ ಕವಿದಂತೆ ಭಾವಿಸುತ್ತಾರೆ.
ಎಲ್ಲಾ ಮಳೆಗಾಲದಲ್ಲೂ ಪ್ರವಾಹದ ಸಂದರ್ಭ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸದ್ಯದ ಪರಿಹಾರ ಘೋಷಿಸಿ ಆ ವಿಷಯವನ್ನು ಅಲ್ಲೇ ಬಿಟ್ಟು ತೆರಳುವದು ಸಾಮಾನ್ಯವಾಗಿದೆ. ಇದರಿಂದಾಗಿ ಸರಕಾರಕ್ಕೂ ಆಗುವ ನಷ್ಟ ಅಪಾರ. ಮತ್ತೊಂದೆಡೆ ಜನಸಮಾನ್ಯರ ಜೀವಕ್ಕೂ ರಕ್ಷಣೆಯಿಲ್ಲ. ಹೀಗಾಗಿ ಪ್ರವಾಹ ಭೀತಿಗೆ ಕೊನೆಯಿಲ್ಲವೇ ಎಂಬದು ಪ್ರಶ್ನೆಯಾಗಿಯೆ ಉಳಿದಿದೆ.
ಈವರೆಗೂ ನದಿ ದಡದಲ್ಲಿ ಬಿದಿರುಗಳ ಆಧಾರದಿಂದಾಗಿ ಮಣ್ಣು ಕುಸಿತ ಕಡೆಮೆಯಾಗಿತ್ತು. ಇದೀಗ ನದಿ ದಡದ ಬಿದಿರುಗಳು ಸಂಪೂರ್ಣವಾಗಿ ಒಣಗಿಹೋಗಿದ್ದು, ಹೊಳೆಬದಿಯ ನಿವಾಸಿಗಳ ಮನೆಗೆ ಆಧಾರವಿಲ್ಲದಂತಾಗಿದೆ. ಮಾತ್ರವಲ್ಲದೇ ಈಗಾಗಲೇ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಅಪಾಯದ ಅಂಚಿನಲ್ಲಿವೆ. ಕಳೆದ ಮಳೆಗಾಲದ ಪ್ರವಾಹದಲ್ಲಿ ಬಹುತೇಕ ಬಿದಿರಿನ ಗುಡ್ಡೆಗಳು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದು, ಹಲವೆಡೆ ಈಗಾಗಲೇ ಮಣ್ಣು ಕುಸಿದಿದೆ. ಪ್ರಮುಖವಾಗಿ ಗುಹ್ಯ, ಕರಡಿಗೋಡು, ನೆಲ್ಲಿಹುದಿಕೇರಿಯ ಬರಡಿ, ಬೆಟ್ಟದಕಾಡು ಮುಂತಾದ ಪ್ರದೇಶಗಳಲ್ಲಿ ವರ್ಷಂಪ್ರತಿ ಪ್ರವಾಹ ಉಂಟಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ನದಿಯ ಎರಡೂ ಬದಿಯ ದಡ ಕುಸಿಯುತ್ತಿದೆ.
ನದಿ ದಡದಲ್ಲಿ ಸೂರು ಕಟ್ಟಿಕೊಂಡು ವಾಸಿಸುತ್ತಿರುವದು ಹೆಚ್ಚಾಗಿ ಬಡ ವರ್ಗದವರೇ ಆಗಿದ್ದರಿಂದ ಸ್ವಂತ ಜಾಗ ಖರೀದಿಸಿ ಮನೆ ಕಟ್ಟಲು ಅಶಕ್ತರಾಗಿದ್ದಾರೆ. ಹೀಗಾಗಿ ಬೇರೆ ಮಾರ್ಗವಿಲ್ಲದೇ ನದಿ ದಡದಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದಾಗಿದೆ.
ಸಿದ್ದಾಪುರ ಭಾಗದಲ್ಲಿ ಏಕರೆಗಟ್ಟಲೆ ಸರಕಾರಿ ಜಾಗವಿದ್ದು, ಜಿಲ್ಲಾಡಳಿತ ಒತ್ತುವರಿ ಜಾಗವನ್ನು ಬಿಡಿಸಿ ನದಿ ದಡದಲ್ಲಿ ವಾಸಿಸುವ ಬಡಪಾಯಿಗಳಿಗೆ ನೀಡಲು ಮುಂದಾಗಬೇಕಿದೆ. ದುರಂತ ಸಂಭವಿಸುವ ಮುಂಚಿತವಾಗಿ ನಮ್ಮ ಅಧಿಕಾರಿ, ಜನಪ್ರತಿನಿಧಿಗಳು ಅಪಾಯದ ಅಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಸುರಕ್ಷಿತ ಪ್ರದೇಶದಲ್ಲಿ ನಿವೇಶನ ಒದಗಿಸಿಕೊಡಬೇಕಾಗಿದೆ.
ಕಾವೇರಿ ನದಿ ದಡದ ಬರೆ ಕುಸಿಯಲು ಪ್ರಮುಖ ಕಾರಣ ಅಕ್ರಮ ಮರಳು ಗಣಿಗಾರಿಕೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮರಳುಗಾರಿಕೆಯಿಂದ ನದಿಯ ರಭಸ ಹೆಚ್ಚಾಗುತ್ತಿದ್ದು, ಮಣ್ಣು ಕುಸಿತ ಸಂಭವಿಸುತ್ತಿದೆ.
ಸಿದ್ದಾಪುರದ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇತ್ತೀಚೆಗೆ ‘ಶಕ್ತಿ’ ವರದಿಯಿಂದ ಎಚ್ಚೆತ್ತುಕೊಂಡ ಪೊಲೀಸ್ ಹಾಗೂ ಕಂದಾಯ ಇಲಾಖೆ ಮರಳು ಹಾಗೂ ತೆಪ್ಪವನ್ನು ಮುಟ್ಟುಗೋಲು ಹಾಕಿ ದಂಧೆಕೋರರಿಗೆ ಬಿಸಿ ಮುಟ್ಟಿಸಿತ್ತು. ಆದರೆ ಇದೀಗ ಸರಕಾರ ನೆಲ್ಲಿಹುದಿಕೇರಿ, ಗುಹ್ಯ, ಹಚ್ಚಿನಾಡು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಟೆಂಡರ್ ಕರೆದಿದ್ದು, ಅಕ್ರಮ ಮರಳುಗಾರಿಕೆಯನ್ನು ಸಕ್ರಮ ಮಾಡಲು ಹೊರಟಿದೆ. ಗಣಿಗಾರಿಕೆಯಿಂದ ಮುಂದಾಗುವ ಅಪಾಯದ ಬಗ್ಗೆ ಕಾಳಜಿ ವಹಿಸದೆ ಟೆಂಡರ್ ನಡೆಸಲು ಮುಂದಾಗಿರುವದು ವಿಪರ್ಯಾಸ.
ಬದಲಿಗೆ ಅಪಾಯದಲ್ಲಿರುವ ನದಿ ದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿ, ಮುಂದಾಗುವ ಅನಾಹುತವನ್ನು ತಪ್ಪಿಸಲಿ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷೆ ಎಂ.ಎ. ಯಮುನ ಆಗ್ರಹಿಸಿದ್ದಾರೆ.
- ವಾಸು ಆಚಾರ್ಯ