ಮಡಿಕೇರಿ, ಮೇ 26: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಶಕ್ತಿ’ ಐದು ಪ್ರಶಸ್ತಿಗಳಿಗೆ ಭಾಜನವಾಗಿದೆ.ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಶಶಿಧರ್ ಸ್ಮರಣಾರ್ಥ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ ‘ಶಕ್ತಿ’ಯ ಹಿರಿಯ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ ಅವರು ಬರೆದ ‘ಶಾಂತೆಯಂಡ ಒಕ್ಕ ಹಾಕಿ ನಮ್ಮೆ’ ವರದಿಗೆ ಲಭಿಸಿದೆ. ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ತಮ್ಮ ತಂದೆ, ತಾಯಿ ಅಜ್ಜಮಾಡ ಸುಬ್ಬಯ್ಯ ಹಾಗೂ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತೋಟಗಾರಿಕಾ ವರದಿ ಪ್ರಶಸ್ತಿ ಕೂಡ ಕಾಯಪಂಡ ಶಶಿ ಸೋಮಯ್ಯ ಅವರು ಬರೆದ ‘ಕಿತ್ತಳೆ ಬೆಳೆಯತ್ತ ರೈತರ ಆಸಕ್ತಿ’ ವರದಿಗೆ ಸಿಕ್ಕಿದೆ.
ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶ್ಯಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ವನ್ಯಜೀವಿ ವರದಿ ಪ್ರಶಸ್ತಿಗೆ ‘ಶಕ್ತಿ’ಯ ಕುಶಾಲನಗರ ವಿಭಾಗದ ವರದಿಗಾರ ಎಂ.ಎನ್. ಚಂದ್ರಮೋಹನ್ ಅವರು ಬರೆದ ‘ಕಾಡಾನೆಗಳ ದುರ್ಗತಿ..., ಜನತೆಗೆ ಭೀತಿ..., ಅರಣ್ಯ ಇಲಾಖೆ ಸಿಬ್ಬಂದಿಗೆ ಫಜೀತಿ..., ಎಂಬ ವರದಿ ಭಾಜನವಾಗಿದೆ. ಸ್ವಸ್ಥ ಸಂಸ್ಥೆ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ
(ಮೊದಲ ಪುಟದಿಂದ) ಸ್ಥಾಪಿಸಿರುವ ಅತ್ಯುತ್ತಮ ಶೈಕ್ಷಣಿಕ ವರದಿ ಪ್ರಶಸ್ತಿ ಕೂಡ ಎಂ.ಎನ್. ಚಂದ್ರಮೋಹನ್ ಅವರು ಬರೆದ ‘ಶಾಲೆಯಲ್ಲಿ ವಿದ್ಯೆಯಿಲ್ಲ..., ಈ ಬಾಲಕನಿಗೆ ಅಜ್ಜಿಯೆ ಎಲ್ಲಾ’ ಎಂಬ ವರದಿಗೆ ಲಭಿಸಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿ ‘ಶಕ್ತಿ’ಯಲ್ಲಿ ಪ್ರಕಟವಾದ ‘ದೇವಟ್ ಪರಂಬು ಸಾಂಸ್ಕøತಿಕ ರಾಜಕಾರಣ’ ಎಂಬ ವರದಿಗೆ ಅಲ್ಲಾರಂಡ ವಿಠಲ ನಂಜಪ್ಪ ಅವರಿಗೆ ಸಿಕ್ಕಿದೆ.
ಪತ್ರಕರ್ತರ ಸಂಘದಿಂದ ನೀಡಲಾಗುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, ಕಾವೇರಿ ಟೈಮ್ಸ್ನಲ್ಲಿ ಪ್ರಕಟವಾದ ಅಲ್ಲಾರಂಡ ವಿಠಲ್ ನಂಜಪ್ಪ ಬರೆದ ‘ಆ ಕಾವೇರಿ ಕಾವೇರಿಯಲ್ಲ. ಇದು ನಂಗ ಕಾವೇರಿ’ ವರದಿ ಆಯ್ಕೆಯಾಗಿದೆ.
ಸಂಘದ ಉಪಾಧ್ಯಕ್ಷರಾಗಿದ್ದ ಸಿ.ಎನ್. ಸುನಿಲ್ ಕುಮಾರ್ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ವೀಡಿಯೋಗ್ರಾಫಿ ಪ್ರಶಸ್ತಿಗೆ ಟಿವಿ 9 ನಲ್ಲಿ ಪ್ರಸಾರವಾದ ನವೀನ್ ಸುವರ್ಣ ಅವರ ‘ಎಲಿಫ್ಯಾಂಟ್ ಲವ್’ ವರದಿ ಆಯ್ಕೆಯಾಗಿದೆ. ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಪ್ರಜಾಸತ್ಯದಲ್ಲಿ ಪ್ರಕಟವಾದ ಹೆಚ್.ಜೆ. ರಾಕೇಶ್ ಬರೆದ ‘ಕೊಡಗಿನಲ್ಲಿ ನಡೆಯುತ್ತಿದೆ ಕಾಲ್ ಗರ್ಲ್ ದಂಧೆ’ ವರದಿ ಆಯ್ಕೆಯಾಗಿದೆ.
ಕೋವರ್ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಕೋವರ್ಕೊಲ್ಲಿ ಚಂದ್ರಶೇಖರ್ ಸ್ಮರಣಾರ್ಥ ಸ್ಥಾಪಿಸಿರುವ ಮಾನವೀಯ ವರದಿ ಕೊಡಗು ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ಹೆಚ್.ಕೆ. ಜಗದೀಶ್ ಬರೆದ ‘ಈಶ್ವರಿ ಗೋಪಿಯ ಕಾಟ ವರದಿ’ ಆಯ್ಕೆಯಾಗಿದೆ.
ಕೊಡಗು ಜಿಲ್ಲಾ ಬೆಳೆಗಾರರ ಸಂಘ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ, ತಾಯಿ ಅಜ್ಜಮಾಡ ಸುಬ್ಬಯ್ಯ ಹಾಗೂ ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೇರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಗೆ ವಿಶ್ವವಾಣಿಯಲ್ಲಿ ಪ್ರಕಟವಾದ ಎಚ್.ಟಿ. ಅನಿಲ್ ಬರೆದ ಕೊಡಗಿನ ‘ಆರೋಗ್ಯ ಇಲಾಖೆಗೆ ತಗುಲಿದೆ ಅನಾರೋಗ್ಯ’ ವರದಿ ಆಯ್ಕೆಯಾಗಿದೆ.
ಕೈಬುಲಿರ ಪಾರ್ವತಿ ಬೋಪಯ್ಯ ತಮ್ಮ ತಂದೆ, ತಾಯಿ ಉತ್ತಯ್ಯ-ಸುಬ್ಬವ್ವ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಗೆ ಕನ್ನಡಪ್ರಭಾದಲ್ಲಿ ಪ್ರಕಟವಾದ ವಿಘ್ನೇಶ್ ಭೂತನಕಾಡು ಬರೆದ ‘ಕಾವೇರಿ ಮೂಲದಲ್ಲೇ ನದಿ ನೀರು ಕಲುಷಿತ’ ವರದಿ ಆಯ್ಕೆಯಾಗಿದೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನಿರ್ದೇಶಕ ಎಸ್.ಎ. ಮುರಳೀಧರ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟವಾದ ಹಿರಿಕರ ರವಿ ಬರೆದ ‘ಭತ್ತದ ಕಣಜ ಖಾಲಿ ಖಾಲಿ’ ವರದಿ ಆಯ್ಕೆಯಾಗಿದೆ.
ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಕಾಧ್ಯಕ್ಷ ಮಂದ್ರೀರ ಮೋಹನ್ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಗೆ ವಿಶ್ವವಾಣಿಯಲ್ಲಿ ಪ್ರಕಟವಾದ ಎಚ್.ಟಿ. ಅನಿಲ್ ಬರೆದ ‘ಗೋಪಾಲಕರನ್ನು ಸಮಾಜ ಗುರಿತಿಸಿ, ಗೌರವಿಸಲಿ’ ವರದಿ ಆಯ್ಕೆಯಾಗಿದೆ. ಶಕ್ತಿ ಸಂಪಾದಕರಾಗಿದ್ದ ಬಿ.ಜಿ. ಅನಂತಶಯನ ತಮ್ಮ ಹೋಂಸ್ಟೇ ಆಲ್ಪೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಸುದ್ದಿ ಛಾಯಾಚಿತ್ರ ಪ್ರಶಸ್ತಿಗೆ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ವಿಘ್ನೇಶ್ ಭೂತನಕಾಡು ಅವರ ‘ರಸ್ತೆ ಪಕ್ಕ ಲಾಲಿ ಹಾಡು’ ಶಿರೋನಾಮೆಯ ಚಿತ್ರ ಆಯ್ಕೆಯಾಗಿದೆ.
ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತಾದ ವರದಿ ಪ್ರಶಸ್ತಿಗೆ ಟಿವಿ9ನಲ್ಲಿ ಪ್ರಸಾರವಾದ ಕೆ.ಬಿ. ಮಂಜುನಾಥ್ ಅವರ ‘ಆಪರೇಷನ್ ಟೈಗರ್’ ಆಯ್ಕೆಯಾಗಿದೆ. ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ಮಂಡಿಬೆಲೆ ದ್ಯಾವಮ್ಮ ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಗೆ ಟಿವಿ9ನಲ್ಲಿ ಪ್ರಸಾರವಾಗಿರುವ ಕೆ.ಬಿ. ಮಂಜುನಾಥ್ ಅವರ ‘ಆಪರೇಷನ್ ಹಂತಕ’ ವರದಿ ಆಯ್ಕೆಯಾಗಿದೆ. ಜೂನ್ 11ರಂದು ನಡೆಯುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.