ಸುಂಟಿಕೊಪ್ಪ, ಮೇ 27: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಅತ್ತೂರು ನಲ್ಲೂರು ಗ್ರಾಮದ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವರ ದ್ವಿತೀಯ ವರ್ಷದ ಪ್ರತಿಷ್ಠಾವಧ್ರ್ಯಂತ್ಯುತ್ಸವ ಹಾಗೂ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಯಾಗ ಶಾಲೆ ಉದ್ಘಾಟನೆ ಕಾರ್ಯಕ್ರಮ, ಉಚಿತ ವಿವಾಹ ಸಮಾರಂಭ ನೇರವೇರಿತು.
ದೇವಾಲಯದಲ್ಲಿ ಬೆಳಿಗ್ಗೆ 6 ಗಂಟೆಗೆ ತಂತ್ರಿಗಳಾದ ಬ್ರಹ್ಮಶ್ರೀ ದೇವಮೂರ್ತಿ ರಾಮಕೃಷ್ಣ ಕಲ್ಲೂರಾಯ ಹಾಗೂ ಕ್ಷೇತ್ರದ ಅರ್ಚಕರಾದ ಪ್ರಭಾಕರ ಕುದ್ದಣ್ಣಾಯರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ಸ್ವಸ್ತಿ ಪುಣ್ಯಾಹ ವಾಚನ, ಸ್ಥಳಶುದ್ಧಿ, ಗಣಪತಿ ಹೋಮ, ದುರ್ಗಾ ಹೋಮ, ರಾಮತಾರಕ ಹೋಮ, ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿಗೆ ಪಂಚಾಮೃತ ಅಭಿಷೇಕ ಪಂಚವಿಂಶಶಿ, ಕಲಶಾಭಿಷೇಕ ಏರ್ಪಡಿಸಲಾಯಿತು.
1 ಜೋಡಿಗೆ ದೇವಾಲಯದ 2ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯ ಸಮಿತಿಯವರು ದಾನಿಗಳ ನೆರವಿನಿಂದ ಉಚಿತ ವಿವಾಹ ಮಹೋತ್ಸವ ಏರ್ಪಡಿಸಿ ಅನ್ನದಾನ ನೀಡಲಾಯಿತು.
ಯಾಗ ಶಾಲೆ ಉದ್ಘಾಟನೆ: ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ಯಾಗ ಶಾಲೆಯನ್ನು ಉದ್ಘಾಟಿಸಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಒಂದು ಗ್ರಾಮದಲ್ಲಿ ದೇವಾಲಯ ಹಾಗೂ ಶಾಲೆ ನಿರ್ಮಾಣವಾದರೆ ಆ ಊರು ಸುಭೀಕ್ಷೆ ಕಾಣಲಿದೆ; ಕತ್ತಲೆಯನ್ನು ಹೊಗಲಾಡಿಸಿ ಬೆಳಕನ್ನು ಕಾಣುವ ಮೂಲಕ ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ ಕಾಣಲು ದೇವರ ಅನುಗ್ರಹ ಮುಖ್ಯ, ನಮ್ಮ ಸಂಸ್ಕøತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು, ಸರಳ ವಿವಾಹದಿಂದ ಸಮಾಜಕ್ಕೆ ಮಾದರಿಯಾಗಬೇಕೆಂದರು.
ಹಾಸನ ಗ್ರಾಹಕರ ವೇದಿಕೆ ಅಧ್ಯಕ್ಷ ಎ. ಲೋಕೇಶ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಬದುಕಿನಲ್ಲಿ ಶಾಂತಿ ನೆಮ್ಮದಿಯಿಂದ ಇರಲು ಧಾರ್ಮಿಕ ಶ್ರದ್ಧಾಕೇಂದ್ರ ಅವಶ್ಯಕವಾಗಿದೆ. ಪ್ರಪಂಚದಲ್ಲಿ ವಿಶೇಷವಾದ ಶಕ್ತಿ ನಮ್ಮನ್ನು ಕಾಪಾಡುತ್ತಿದ್ದು ಅದೇ ದೇವರ ಶಕ್ತಿಯಾಗಿದೆ. ಈ ದೇವಾಲಯ ಸಮಿತಿಯವರ ಪರಿಶ್ರಮ ಸ್ತುತ್ಯಾರ್ಹವಾದದು ಎಂದರು.
ಉಚಿತ ವಿವಾಹಕ್ಕೆ ತಾಳಿಯನ್ನು ಉದಾರವಾಗಿ ನೀಡಿದ ಮುಳಿಯ ಜ್ಯುವೆಲರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ಯಾವದೇ ಪೂಜಾ ಕೈಂಕಾರ್ಯ ನೆರವೇರಿಸುವಾಗ ಸಪ್ತನದಿಗಳ ಶ್ಲೋಕ ಉವಾಚಿಸುತ್ತೇವೆ ಕಾವೇರಿ ನದಿಯ ತಟಗಳಲ್ಲಿ ಇರುವ ಈ ನಾಡಿನ ಜನತೆ ಪುಣ್ಯವಂತರು. ಗೋಹತ್ಯೆ ನಿಷೇಧ ಕೇಂದ್ರ ಸರಕಾರ ಮಾಡಿರುವದು ನಿಜಕ್ಕೂ ದೇಶದ ಉನ್ನತಿಗೆ ಕಾರಣವಾಗಲಿದೆ ಎಂದು ಹೇಳಿದರು.
ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಈ ಗ್ರಾಮದಲ್ಲಿ ಉತ್ತಮವಾದ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ಗ್ರಾಮಸ್ಥರ ಪರಿಶ್ರಮದಿಂದ ನಿರ್ಮಿಸಲಾಗಿದೆ. ಈ ದೇವಾಲಯದ ಅಭಿವೃದ್ಧಿಗೆ ಸಮಿತಿಯವರೊಂದಿಗೆ ಗ್ರಾಮಸ್ಥರು ಕೈಜೋಡಿಸಬೇಕು. ದೇವಾಲಯದ ಅಡುಗೆ ಕೋಣೆ ನಿರ್ಮಿಸಲು ಜಿ.ಪಂ.ನಿಂದ 2ಲಕ್ಷ ಅನುದಾನ ನೀಡುವದಾಗಿ ಘೋಷಿಸಿದರು.
ಗೌರವ ಅಧ್ಯಕ್ಷ ಹಾಗೂ ದಾನಿ ಪಿ.ಕೆ. ಮುತ್ತಣ್ಣ, ಹರೀಶ್ ಪೈ, ಮಾಜಿ ಜಿ.ಪಂ. ಅಧ್ಯಕ್ಷೆ ಸಿಮ್ಲಾ ಶ್ರೀನಿವಾಸ್, ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಕೃಷ್ಣ ವೇದಿಕೆಯಲ್ಲಿದ್ದರು.
ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಜಯಂತ್, ಸದಸ್ಯರಾದ ಡಿ.ಕೆ. ಗಂಗಾಧರ, ಡಿ.ಕೆ. ವಾಸು, ರವಿ, ಪದಾಧಿಕಾರಿಗಳು ಹಾಜರಿದ್ದರು. ಕಾರ್ಯದರ್ಶಿ ಡಾ.ಶಶಿಕಾಂತ ರೈ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.