ಮಡಿಕೇರಿ, ಮೇ 27: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬೇಗುದಿ ಇದೀಗ ಬಟ್ಟಾಬಯಲಾಗಿದೆ. ಪಕ್ಷದ ಮುಖಂಡರ ಮೇಲೆ ವಿಶ್ವಾಸ ಕಳೆದು ಕೊಂಡು ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನದ ಹೊಗೆ ಬಹಿರಂಗ ವಾಗಿ ಬೆಳಕಿಗೆ ಬಂದಿದೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಮೂಲಕ ‘ಹೊಸ ಬಾಂಬ್’ ಸ್ಫೋಟಗೊಂಡಿದ್ದು, ಪಕ್ಷಕ್ಕೆ ಇರಿಸುಮುರಿಸಾದಂತಾಗಿದೆ. ನಗರದಲ್ಲಿ ಇಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್‍ನ ಮಹತ್ವದ ಸಭೆಯಲ್ಲಿ ಪಕ್ಷದ ನಾಯಕರ ಮೇಲಿನ ಅಸಮಾಧಾನ ಆಕ್ರೋಶದ ರೀತಿಯಲ್ಲಿ ಕಾರ್ಯ ಕರ್ತರಿಂದ ಸ್ಫೋಟಗೊಂಡಿತು. ಸಾಮೂಹಿಕವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದೇಶವನ್ನೂ ಇದರೊಂದಿಗೆ ನೀಡಲಾಗಿದೆ.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಅಧ್ಯಕ್ಷತೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಮುಖರು, ಬ್ಲಾಕ್‍ನ ಇತರ ವಲಯಗಳ ಅಧ್ಯಕ್ಷರು ಕಾಂಗ್ರೆಸ್‍ನ ಚುನಾಯಿತ ಜನಪ್ರತಿನಿಧಿಗಳು ಹಾಗೂ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಎಳೆ ಎಳೆಯಾಗಿ ಬೆಳಕಿಗೆ ಬಂದಿತು.

ಸಭೆಯಲ್ಲಿ ಪ್ರಮುಖವಾಗಿ ವ್ಯಕ್ತಗೊಂಡಿದ್ದು, ಪಕ್ಷದ ಮುಖಂಡರ ಮೇಲಿನ ಕೋಪ, ನಾಯಕರಿಂದ ಕಾರ್ಯಕರ್ತರಿಗೆ ಸೂಕ್ತ ಸ್ಪಂದನೆ - ಮನ್ನಣೆ ಸಿಗುತ್ತಿಲ್ಲ ಪಕ್ಷವೇ ಅಧಿಕಾರದಲ್ಲಿದ್ದರೂ, ಕಾರ್ಯಕರ್ತರಿಗೆ ಏನೂ ಪ್ರಯೋಜನವಾಗುತ್ತಿಲ್ಲ. ಹಲವಷ್ಟು ಸಮಯದಿಂದ ದುಡಿದಿರುವ ಕಾರ್ಯಕರ್ತರು ಕಡೆಗಣಿಸಲ್ಪಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಮರ್ಥ ನಾಯಕತ್ವ ಇಲ್ಲದೆ ಕಾರ್ಯಕರ್ತರಿಗೆ ಯಾವ ಪ್ರಯೋಜನವೂ ಆಗಿಲ್ಲ. ಈ ಕಾರಣದಿಂದ ತಳಮಟ್ಟದಿಂದ ಕಾರ್ಯಕರ್ತರು ಪ್ರಶ್ನಿಸುವಂತಾಗಿದ್ದು, ಪದಾಧಿಕಾರಿಗಳು ಕಾರ್ಯಕರ್ತರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಯಾವ ಬೇಡಿಕೆ - ಮನವಿಗೂ ಸ್ಪಂದನೆ ಸಿಗುತ್ತಿಲ್ಲ. ಚುನಾವಣೆ ಬಂದಾದ ಮಾತ್ರ ತಮ್ಮ ನೆನಪಾಗುತ್ತದೆ ಎಂಬ ವಿಚಾರಗಳು

(ಮೊದಲ ಪುಟದಿಂದ) ಕಾವೇರಿದ ಚರ್ಚೆಯ ಮೂಲಕ ಹೊರಬಿದ್ದಿತು.

ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನವೂ ಸಿಗುತ್ತಿಲ್ಲ. ಒಬ್ಬರೇ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಉಸ್ತುವಾರಿ ಸಚಿವರುಗಳು ಈ ತನಕ ನಾಲ್ಕು ಮಂದಿಯಾಗಿದ್ದಾರೆ. ಇವರುಗಳು ಕಾರ್ಯಕರ್ತರಿಗೆ ಸಿಗುತ್ತಿಲ್ಲ ಎಂಬ ಆಕ್ಷೇಪವೂ ಕೇಳಿಬಂತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಆಂತರಿಕ ಸಮಸ್ಯೆ ಈ ತನಕ ಹೊರಗೆ ಬಂದಿರಲಿಲ್ಲ ಇದೀಗ ಚುನಾವಣೆ ಎದುರಾಗುತ್ತಿದ್ದು, ಕಾರ್ಯಕರ್ತರಿಗೆ ಉತ್ತರಿಸುವದು ಕಷ್ಟವಾಗುತ್ತಿದೆ. ಹಲವಾರು ಸಮಿತಿಗಳಿಗೆ ನೇಮಕಾತಿ ಮಾಡದೆ ಹಲವರು ಅವಕಾಶ ವಂಚಿತರಾಗಿದ್ದಾರೆ. ಅಧಿಕಾರ ವಿಕೇಂದ್ರಿಕರಣದ ಅಗತ್ಯವಿದೆ. ನಾಯಕರ ಸ್ಪಂದನೆ ಇಲ್ಲದೆ ಈ ಎಲ್ಲಾ ಸಮಸ್ಯೆಗಳು ಉದ್ಭವವಾಗಿದೆ ಎಂದರು.

ಪಕ್ಷ ಸಂಘಟನೆ ಮುಂದೆ ಹೇಗೆ ಎಂದು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಪಕ್ಷ ತೊರೆಯುವ ವಿಚಾರಕ್ಕೆ ಕರೆದಿಲ್ಲ. ಸ್ಪಂದನ ಸಿಗದಿದ್ದರೆ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಾಗದು. ಎಲ್ಲಾ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಅವರವರ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವದಾಗಿ ಗಣೇಶ್ ಹಾಗೂ ಇತರ ಹಲವರು ಸಭೆಯಲ್ಲಿ ಹೇಳಿದರು.

ಸಮರ್ಥರು ಅಧ್ಯಕ್ಷರಾಗಲಿ : ಪಕ್ಷಕ್ಕೆ ಒಂದೂವರೆ ವರ್ಷದಿಂದ ನೂತನ ಅಧ್ಯಕ್ಷ ನೇಮಕ ಮಾಡಲಾಗಿಲ್ಲ ಎಂಬ ಆಕ್ಷೇಪವೂ ಸಭೆಯಲ್ಲಿ ಕೇಳಿಬಂತು. ಪಕ್ಷ ವಿರೋಧಿ ಚಟುವಟಿಕೆ, ಮುಖಂಡರ ನಿರ್ಲಕ್ಷ್ಯ ಧೋರಣೆ, ಜಾತಿ ವೈಮನಸ್ಸು, ಸಂಘಟನೆ ಕೊರತೆ, ನಿಷ್ಠಾವಂತರ ಕಡೆಗಣನೆ ಇತ್ಯಾದಿ ವಿಚಾರಗಳಿಂದ ಕಾಂಗ್ರೆಸ್ ಕೊಡಗಿನಲ್ಲಿ ದಿನೇ ದಿನೇ ಅಧಃ ಪತನ ಕಾಣುತ್ತಿದೆ ಎಂದು ಹಲವರು ಆಕ್ಷೇಪಿಸಿದರು. ಸಾಮಾನ್ಯ ಜನರೊಟ್ಟಿಗೆ ಬೆರೆಯುವ ಕಾರ್ಯಕರ್ತರನ್ನು ಬೆಳೆಸುವ ಸಮರ್ಥ ವ್ಯಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಬೇಕೆಂಬ ಒತ್ತಾಯ ಕೇಳಿಬಂತು. ಕಾರ್ಯಕರ್ತರ ನೋವು ಕೇಳಲು ಎಲ್ಲಾ ಮುಖಂಡರನ್ನು ಸೇರಿಸಿ ಎಲ್ಲರ ಸಮ್ಮುಖದಲ್ಲಿ ಸಭೆ ಕರೆಯಬೇಕೆಂದು ಕೆಲವರು ಆಗ್ರಹಿಸಿದರು.

ತಾ. 30ರಂದು ಸಭೆ : ಸಭೆಯಲ್ಲಿ ಪಾಲ್ಗೊಂಡಿದ್ದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಸರಕಾರ ಉತ್ತಮ ಕೆಲಸ ಮಾಡಿದೆ. ಪಕ್ಷವೂ ಸರಿಯಾಗಿದೆ. ಸಮರ್ಥ ನಾಯಕತ್ವ ಇಲ್ಲದೆ ಕಾರ್ಯಕರ್ತರಿಗೆ ಹಲವು ರೀತಿಯಲ್ಲಿ ಅಸಮಾಧಾನವಿದೆ ಎಂದರು. ತಾ. 30ರಂದು ಸೋಮವಾರಪೇಟೆಯಲ್ಲಿ ಮಡಿಕೇರಿ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದು, ಅಲ್ಲಿ ಈ ಬಗ್ಗೆ ಚರ್ಚಿಸಬಹುದೆಂದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯ ಉಸ್ಮಾನ್, ಎಂ.ಎ. ಹನೀಫ್, ಅಪ್ರು ರವೀಂದ್ರ, ಮುಂಡೋಡಿ ನಂದ, ಕೊಡಗರಹಳ್ಳಿಯ ಅಬ್ಬಾಸ್, ಹೊಸಕೋಟೆಯ ಮಂಜುನಾಥ್, ಗಾಳಿಬೀಡುವಿನ ಅನಂತಕುಮಾರ್, ಮಕ್ಕಂದೂರಿನ ಸುಜು ತಿಮ್ಮಯ್ಯ, ಬಲ್ಲಮಾವಟಿಯ ನೆರವಂಡ ಉಮೇಶ್, ಚೆಟ್ಟಳ್ಳಿಯ ಪ್ಯಾಟ್ರಿಕ್ ಲೋಬೋ, ಕಡಗದಾಳುವಿನ ರಮೇಶ್ ಪೈ, ಸುಂಟಿಕೊಪ್ಪದ ರಫೀಕ್, ನಂಜರಾಯಪಟ್ಟಣದ ಲೋಕನಾಥ್, ಎಂ.ಎ. ಹನೀಫ್ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.

ಡಿ.ಸಿ.ಸಿ. ಸದಸ್ಯ ಉಸ್ಮಾನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಹಿಂದುಳಿದ ವರ್ಗದ ಸುಂದರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.