ಗೋಣಿಕೊಪ್ಪಲು, ಮೇ 26: ಕೊಡಗು ಜಿಲ್ಲೆಯ ಬಲಿಜ ಜನಾಂಗ ವಿವಿಧ ಬೇಡಿಕೆಗಳ ಹಕ್ಕೊತ್ತಾಯಕ್ಕಾಗಿ ತಾ.27 ರಂದು ರಾತ್ರಿ 10 ಗಂಟೆಗೆ ಸುಮಾರು 10 ಸರ್ಕಾರಿ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ 700 ಕ್ಕೂ ಅಧಿಕ ಮಂದಿ ಬೆಂಗಳೂರಿಗೆ ತೆರಳಿ ತಾ.28 ರಂದು ಅರಮನೆ ಮೈದಾನದಲ್ಲಿ ಜರುಗುವ ಬೆಂಗಳೂರು ಚಲೋ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಿಂದ ಇದೇ ಪ್ರಥಮ ಬಾರಿಗೆ ಬಲಿಜ ಜನಾಂಗ ತಮ್ಮ ಬೇಡಿಕೆಗೆ ಒತ್ತಾಯಿಸಿ ಒಟ್ಟು 10 ಬಸ್‍ಗಳಿಂದ ಹೊರಡಲಿದ್ದಾರೆ.

ಬೆಂಗಳೂರು ಅರಮನೆ ಮೈದಾನದತ್ತ ರಾಜ್ಯದಾದ್ಯಂತ ಸುಮಾರು 2500ಕ್ಕೂ ಅಧಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೂಲಕ ಬಲಿಜ ಸಮುದಾಯ ಆಗಮಿಸಲಿದ್ದು, 1.50 ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು 2.50 ಲಕ್ಷ ಬಲಿಜರು ಸಮಾವೇಶಗೊಳ್ಳಲಿದ್ದಾರೆ ಎಂದು ಮಾಜಿ ಹಿಂದುಳಿದ ಆಯೋಗದ ಅಧ್ಯಕ್ಷ, ಲಂಕೇಶ್ ಪತ್ರಿಕೆ ಹಿರಿಯ ವರದಿಗಾರ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲ ದ್ವಾರಕಾನಾಥ್ ತಿಳಿಸಿದ್ದಾರೆ.

ತಾ.27 ರಂದು ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ಡಿಪೆÇೀದ ಮುಂಭಾಗ ಸಂಜೆ 5 ಗಂಟೆಗೆ ಬಲಿಜ ಸಮಾಜ ಜಿಲ್ಲಾ ಕಾರ್ಯದರ್ಶಿ ಟಿ.ವಿ.ಲೋಕೇಶ್ ಪೂಜೆ ನೆರವೇರಿಸಲಿದ್ದಾರೆ. ‘ಬೆಂಗಳೂರು ಚಲೋ’ ಕಾರ್ಯಕ್ರಮಕ್ಕೆ ಶಕ್ತಿ ಸಂಪಾದಕರಾದ ಜಿ.ಚಿದ್ವಿಲಾಸ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಾಲ್ಗೊಳ್ಳಲಿದ್ದಾರೆ.

ಮೂರು ತಾಲೂಕು ಅಧ್ಯಕ್ಷರಾದ ಮೀನಾಕ್ಷಿ ಕೇಶವ್, ಗಣೇಶ್ ನಾಯ್ಡು, ಟಿ.ಎಸ್.ಬಾಲಕೃಷ್ಣ, ಪದ್ಮಾ ಮಡಿಕೇರಿ, ಗೀತಾ ನಾಯ್ಡು, ಖಜಾಂಚಿ ಲೋಕನಾಥ್, ಕೊಡಗು ಬಲಿಜ ವಿದ್ಯಾಭಿವೃದ್ಧಿ ನಿಧಿಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಲಲಿತಾ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನಿಂದ ಹಾಗೂ ಸೋಮವಾರಪೇಟೆ ತಾಲೂಕಿನಿಂದ ತಲಾ ಮೂರು ಬಸ್ ಹಾಗೂ ವೀರಾಜಪೇಟೆ ತಾಲೂಕಿನಿಂದ ನಾಲ್ಕು ಬಸ್ ತಾ.27 ರಂದು ರಾತ್ರಿ 10 ಗಂಟೆಯಿಂದ ಬೆಂಗಳೂರಿಗೆ ಕೊಡಗು ಬಲಿಜ ಜನಾಂಗವನ್ನು ಕರೆದೊಯ್ಯಲಿದೆ ಎಂದು ತಿಳಿಸಿದ್ದಾರೆ.