ಕೂಡಿಗೆ, ಮೇ 26: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ರೈತರು ಭೂಮಿ ಯನ್ನು ಉಳುಮೆ ಮಾಡಿ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶಗಳಾದ ಕೂಡಿಗೆ ಗ್ರಾಮ ಪಂಚಾಯಿತಿಯ ಸೀಗೆ ಹೊಸೂರು, ಕೂಡುಮಂಗಳೂರು ಗ್ರಾ.ಪಂ.ನ ಚಿಕ್ಕತ್ತೂರು-ದೊಡ್ಡತ್ತೂರು, ತೊರೆನೂರು, ಅಳುವಾರ, 6ನೇ ಹೊaಸಕೋಟೆ, ಸಿದ್ಧಲಿಂಗಪುರ ವ್ಯಾಪ್ತಿಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯುವ ರೈತರು ಭೂಮಿ ಹೊಂದಿದ್ದು, ಈಗಾಗಲೇ ಜೋಳ ಬಿತ್ತನೆ ಮಾಡಲು ಭೂಮಿಯು ಹದವಾಗಿರುವದರಿಂದ ಈ ವ್ಯಾಪ್ತಿಯ ರೈತರು ಬಿತ್ತನೆ ಬೀಜವನ್ನು ಬಿತ್ತುವ ಕಾರ್ಯದಲ್ಲಿ ತೊಡಸಿಕೊಂಡಿದ್ದಾರೆ.
ಸಹಕಾರ ಸಂಘಗಳಲ್ಲಿ ದಾಸ್ತಾನಿರುವ ಜೋಳದ ಬಿತ್ತನೆ ಗಳಾದ ಗಂಗಾ, ಕಾವೇರಿ, ವಿವಿಧ ಹೈಬ್ರಿಡ್ ತಳಿಗಳನ್ನು ಖರೀದಿಸಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಲು ಆರಂಭಿಸಿದ್ದಾರೆ. ಈ ವ್ಯಾಪ್ತಿಯ ಜಮೀನುಗಳಿಗೆ ಭೇಟಿ ನೀಡಿದ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ರೈತರಲ್ಲಿ ಮನವಿ ಮಾಡಿಕೊಳ್ಳುತ್ತ ತಮ್ಮ ಜಮೀನಿನ ಮಣ್ಣುಗಳನ್ನು ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಮಣ್ಣಿನ ಅನುಗುಣವಾಗಿ ಗೊಬ್ಬರವನ್ನು ಜಮೀನಿಗೆ ಹಾಕಬೇಕು ಎಂದು ರೈತರಿಗೆ ಮನವರಿಕೆ ಮಾಡಿದರು.
- ಕೆ.ಕೆ. ನಾಗರಾಜಶೆಟ್ಟಿ