ಮಡಿಕೇರಿ, ಮೇ 26: ಬ್ಯಾಹ್ಮಣ್ಯ ಎನ್ನುವದು ಸಂಸ್ಕøತಿ ಹಾಗೂ ಸಂಸ್ಕಾರಗಳ ಸೂಚಕವಾಗಿದೆ. ಸಮದೃಷ್ಟಿ, ಸಮಚಿತ್ತ, ಸಾತ್ವಿಕತೆ, ಸಂಭಾವಿತನಾಗಿರುವವನೇ ಬ್ರಾಹ್ಮಣನೆನಿಸಿಕೊಳ್ಳುತ್ತಾನೆ. ಹುಟ್ಟಿನಿಂದಷ್ಟೇ ಬ್ರಾಹ್ಮಣ್ಯವನ್ನು ಸಾಧಿಸಲು ಸಾಧ್ಯವಿಲ್ಲ. ಸರ್ವಜನರ ಹಿತ ಸಾಧಿಸುವ ಮೂಲಕ ಬ್ರಾಹ್ಮಣ್ಯವನ್ನು ಉಳಿಸಬಹುದೆಂದು ಅಖಿಲ ಭಾರತ ಬ್ರಾಹ್ಮಣ ಸಂಘಗಳ ಒಕ್ಕೂಟದ ಪೂರ್ವಾಧ್ಯಕ್ಷ ಡಾ.ಕೆ.ಪಿ. ಪುತ್ತೂರಾಯ ವಿಶ್ಲೇಷಿಸಿದರು.

ನೂರು ಸಂವತ್ಸರ ಕಳೆದ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಭವನಕ್ಕೆ ಇಂದು ಶಂಕುಸ್ಥಾಪನೆ ನೆರವೇರಿದ ಬಳಿಕ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಮುಂದುವರಿದ ಅವರು ಮಹಾತ್ಮಗಾಂಧಿ ಹೇಳಿದ್ದ ‘ಎಲ್ಲಾ ಸಂಸ್ಕøತಿಯನ್ನು ಪ್ರೀತಿಸು, ನಿನ್ನ ಸಂಸ್ಕøತಿಯಲ್ಲಿ ಜೀವಿಸು’ ಎಂಬ ಮಾತನ್ನು ಸ್ಮರಿಸಿದರು. ಹುಟ್ಟು ಆಕಸ್ಮಿಕವಾಗಿದ್ದು, ಜಾತಿಯ ಆಧಾರದಲ್ಲಿ ಮಾಡುವ ಎಲ್ಲಾ ಕೆಲಸವೂ ಅಸಮಂಜಸ ಎಂದರು. ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣರು ತುಳಿತದ ನಡುವೆಯೂ ಪ್ರತಿಭೆಯಲ್ಲಿ ಬಹುಸಂಖ್ಯಾತರೇ ಎಂದು ಉದಾಹರಣೆ ಸಹಿತ ನುಡಿದರು. ಪ್ರತಿಭೆ ಎನ್ನುವದು ಗಳಿಕೆ. ಅದು ಭಿಕ್ಷೆ ಅಥವಾ ದಾನವಲ್ಲ ಎಂದ ಅವರು ಮೀಸಲಾತಿ ಮಿತಿಮೀರಬಾರದೆಂದರು. ಅರ್ಹತೆಯ ಆಧಾರದಲ್ಲಿ, ಆರ್ಥಿಕ ಮಟ್ಟದ ಆಧಾರದಲ್ಲಿ ಅರ್ಹ ಹುದ್ದೆಗಳಿಗೆ ಆಯ್ಕೆಯಾದಲ್ಲಿ ಮಾತ್ರ ದೇಶ ಮೇಲ್ಬರಲು ಸಾಧ್ಯ ಎಂದರು.

(ಮೊದಲ ಪುಟದಿಂದ) ಜಾತಿ ಎಂಬದು ಜನ್ಮದಿಂದ ಬೇಡ, ಕರ್ಮದಿಂದ ಬರಲಿ ಎಂದರು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ತನ್ನ ಏಳಿಗೆಯೊಂದಿಗೆ ‘ಸರ್ವೇ ಜನಾ ಸುಖಿನೋ ಭವಂತು’ ಎಂದು ಪ್ರಾರ್ಥಿಸುವ ವಿಶೇಷ ಜನಾಂಗ ಬ್ರಾಹ್ಮಣರದ್ದು ಎಂದರು. ಈ ಹಿಂದೆ ದೇಶಕ್ಕಾಗಿ ನಾನು, ಸಂಘಟನೆಗಳಿಗಾಗಿ ನಾನು ಎಂಬ ಉದ್ದೇಶ ‘ನನಗಾಗಿ ದೇಶ, ನನಗಾಗಿ ಸಂಘಟನೆಗಳು’ ಎಂದು ಬದಲಾಗಿದೆ ಎಂದರು. ಇಂತಹ ಸಂದರ್ಭದಲ್ಲಿ ಪರೋಪಕಾರಕ್ಕಾಗಿ ನಿಲ್ಲುವ ಬ್ರಾಹ್ಮಣರು ನಿರ್ಮಿಸುತ್ತಿರುವ ಶತಮಾನೋತ್ಸವ ಭವನ ಎಲ್ಲರ ಬದುಕಿನ ಬೆಳಕಾಗಲಿ ಎಂದು ಶುಭ ಹಾರೈಸಿದರು.

ಶತಮಾನೋತ್ಸವ ಭವನದ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ ತಮ್ಮ ನಿಧಿಯಿಂದ ಹತ್ತು ಲಕ್ಷ ರೂ. ನೀಡುವ ಭರವಸೆ ನೀಡಿದರು. ನಗರ ಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಶುಭ ಹಾರೈಸಿದರು.

ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಜಿ.ಕೆ. ಗೋಪಾಲಕೃಷ್ಣ ಅವರಿಂದ ಸ್ವಾಗತ, ಗೀತಾ ಗಿರೀಶ್ ಮತ್ತು ಸಿ.ಎಸ್. ಸುರೇಶ್ ಅವರಿಂದ ಪರಿಚಯ, ಕಾರ್ಯದರ್ಶಿ ಅರುಣ್ ಕುಮಾರ್ ಅವರಿಂದ ವಂದನಾರ್ಪಣೆ ನಡೆಯಿತು. ಕಟ್ಟಡ ನಿಧಿ ಕಾರ್ಯದರ್ಶಿ ವಿಶ್ವನಾಥ್ ಮತ್ತು ಸದಸ್ಯ ಸಂಪತ್ ಕುಮಾರ್ ಮಾತನಾಡಿದರು.