ಮಡಿಕೇರಿ, ಮೇ 26: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಮಹಿಳಾ ಸದಸ್ಯರಿಗೆ ಅಡುಗೆ ಅನಿಲ ಉಚಿತ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಭಾರತ ಸರ್ಕಾರವು ‘ಉಜ್ವಲ’ ಯೋಜನೆ ಜಾರಿಗೊಳಿಸಿದ್ದು, ಅರ್ಹರಿಗೆ ಉಜ್ವಲ ಯೋಜನೆ ತಲಪಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಜಿಲ್ಲೆಯ ಎಲ್.ಪಿ.ಜಿ. ವಿತರಕರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಉಜ್ವಲ’ ಯೋಜನೆ ಅನುಷ್ಠಾನ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಬಡ ಕುಟುಂಬಗಳಿಗೆ ಉಜ್ವಲ ಯೋಜನೆ ನೀಡಲು ಮುಂದಾಗಿದೆ. ಆದ್ದರಿಂದ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು.
ಜಿಲ್ಲೆಯ ಆದಿವಾಸಿಗಳು ಇನ್ನೂ ಎಲ್.ಪಿ.ಜಿ. ಸಂಪರ್ಕವನ್ನು ಹೊಂದಿರುವದಿಲ್ಲ. ಆದ್ದರಿಂದ ಜಿಲ್ಲೆಯ ಪ್ರತಿಯೊಂದು ಬಡ ಕುಟುಂಬಗಳೂ ಅನಿಲ ಸಂಪರ್ಕ ಹೊಂದಬೇಕು. ಆ ನಿಟ್ಟಿನಲ್ಲಿ ಬಡವರಿಗೆ ಉಜ್ವಲ ಯೋಜನೆಯನ್ನು ತಲಪಿಸುವ ಸಂಬಂಧ ಅಗತ್ಯ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಆದಿವಾಸಿಗಳು ಸೇರಿದಂತೆ ಇತರ ಅನಿಲ ಸಂಪರ್ಕ ಹೊಂದಿರದ ಕುಟುಂಬಗಳಿಗೆ ಉಜ್ವಲ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಐಟಿಡಿಪಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಹಾರ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಈ ಸಂದರ್ಭ ಮಾತನಾಡಿದ ನಗರದ ದೇವಿಗ್ಯಾಸ್ನ ವ್ಯವಸ್ಥಾಪಕ ಕೆ.ಎಸ್. ರಮೇಶ್, ತೋಟದ ಲೈನ್ ಮನೆಗಳಲ್ಲಿ ವಾಸ ಮಾಡುವವರು ಅನಿಲ ಸಂಪರ್ಕ ಹೊಂದಿರುವದಿಲ್ಲ. ಸೌದೆಯನ್ನೇ ಉಪಯೋಗಿಸುತ್ತಿದ್ದೇವೆ. ಸೀಮೆಎಣ್ಣೆ ವಿತರಿಸಿದರೆ ಸಾಕು ಎಂದು ಹೇಳುತ್ತಾರೆ. ಕಡುಬಡವರು ಹಣ ಪಾವತಿಸಿ ಅನಿಲ ಸಂಪರ್ಕ ಪಡೆಯಲು ಮುಂದಾಗುವದಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಬಿಪಿಎಲ್ ಕುಟುಂಬದವರ ಪಡಿತರ ಚೀಟಿಯಲ್ಲಿ ಪ್ರಥಮವಾಗಿ ಮಹಿಳೆಯರ ಹೆಸರು ಇದ್ದಲ್ಲಿ ಉಜ್ವಲ ಯೋಜನೆ ಅಪ್ಡೇಟ್ ಆಗುತ್ತದೆ. ಪ್ರಥಮವಾಗಿ ಪುರುಷರ ಹೆಸರು ಇದ್ದಲ್ಲಿ ಅಪ್ಡೇಟ್ ಆಗುವದು ಕಷ್ಟಸಾಧ್ಯ ಎಂದು ಕೆ.ಎಸ್. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಎಲ್ಪಿಜಿ ಸಂಪರ್ಕ ಹೊಂದಿರದ ಬಿಪಿಎಲ್ ಕುಟುಂಬದವರಿಗೆ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ನೀಡಲು ಅಗತ್ಯ ವ್ಯವಸ್ಥೆ ಮಾಡುವಂತೆ ಹೇಳಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ ಮಾತನಾಡಿ, ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರೂ. 1,600 ಮತ್ತು ರಾಜ್ಯ ಸರ್ಕಾರದಿಂದ ರೂ. 1 ಸಾವಿರ ಎರಡು ಬರ್ನಾಲ್ ಉಳ್ಳ ಗ್ಯಾಸ್ ಸ್ಟವ್ ನೀಡಲಾಗುತ್ತದೆ. ಅನಿಲ ಸಂಪರ್ಕವಿಲ್ಲದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯವನ್ನು ಶೇ. 100 ರಷ್ಟು ಎಲ್ಪಿಜಿ ಯುಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ ಅನಿಲ ಭಾಗ್ಯ ಯೋಜನೆಯನ್ನು ತಲಪಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಗ್ರಾಮಾಂತರ ಪ್ರದೇಶದಲ್ಲಿರುವ ಕೆಲವು ಕುಟುಂಬಗಳು ಅನಿಲ ಸಂಪರ್ಕ ಹೊಂದಿದ್ದರೂ ಸಹ ಸಹಾಯಧನಯುಕ್ತ ಸೀಮೆಎಣ್ಣೆಯನ್ನು ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಪಡಿತರ ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಪುನರ್ ಬೆಳಕು ಯೋಜನೆಯನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಅವರು ಜಿಲ್ಲೆಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿದ್ದು, ಇವರು ಅಡುಗೆಗೆ ಸೌದೆಯನ್ನೇ ಅವಲಂಭಿಸಿದ್ದಾರೆ. ಆದ್ದರಿಂದ ಉಜ್ವಲ ಯೋಜನೆಯಡಿ ಎಲ್ಪಿಜಿ ಸಂಪರ್ಕ ಕಲ್ಪಿಸಬೇಕಿದೆ ಎಂದು ತಿಳಿಸಿದರು.
ಕೂರ್ಗ್ ಗ್ಯಾಸ್ ಏಜೆನ್ಸಿಯ ಈಶ್ವರ ಕುಮಾರ್, ವಿಜಯ ವಿನಾಯಕ ಗ್ಯಾಸ್ ಏಜೆನ್ಸಿಯ ಶಾಂತ ಕುಮಾರಿ, ರಾಜ ರಾಜೇಶ್ವರಿ ಗ್ಯಾಸ್ ಏಜೆನ್ಸಿಯ ಸಿ.ಎಂ. ಮಂದಣ್ಣ, ಸುಬ್ರಮಣ್ಯ ಗ್ಯಾಸ್ ಏಜೆನ್ಸಿಯ ಮಾದಪ್ಪ, ಬೆನಕ ಗ್ಯಾಸ್ ಏಜೆನ್ಸಿಯ ಎಸ್.ಎನ್. ಶ್ರೀಧರ, ಪ್ರಜ್ಞಾ ಗ್ಯಾಸ್ ಏಜೆನ್ಸಿಯ ಪರೀಕ್ಷಿತ್ ಎಸ್.ವಿ., ಗಜಾನನ ಗ್ಯಾಸ್ ಏಜೆನ್ಸಿಯ ಪಿ.ಕೆ. ರವಿ, ರವಿರಾಜ್ ಗ್ಯಾಸ್ ಏಜೆನ್ಸಿಯ ಎನ್. ಪರಮಶಿವ, ವೀರಾಜಪೇಟೆ, ಕೊಡಗು ಇಂಡೇನ್ ಸರ್ವೀಸ್ನ ಚೈತ್ರ ಭಾರತೀಶ್, ಜಿ.ಪಂ. ಉಪ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ನಗರಸಭೆಯ ಆರೋಗ್ಯ ನಿರೀಕ್ಷಕ ರಮೇಶ್, ಆಹಾರ ನಿರೀಕ್ಷಕರು ಇತರರು ಇದ್ದರು.