ಸೋಮವಾರಪೇಟೆ, ಮೇ 27: ತಾಲೂಕು ಹಿಂದೂ ಮಲೆಯಾಳಿ ಸಮಾಜಕ್ಕೆ ನೂತನ ಕಟ್ಟಡ ಹೊಂದಿ ಕೊಳ್ಳಲು ಶೀಘ್ರದಲ್ಲೇ ಯೋಜನೆ ತಯಾರಾಗಲಿದ್ದು, ಸಮಾಜ ಬಾಂಧವರು ಸಂಘದ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡ ಬೇಕೆಂದು ಸಮಾಜದ ಸಲಹೆಗಾರ, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ ಹೇಳಿದರು.
ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾದರೆ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯ ಎಂದರು.
ಹಿಂದೂ ಮಲೆಯಾಳಿ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ಒದಗಿಸಲು ತಾವು ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ನೀಡುವದಾಗಿ ಘೋಷಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮತ್ತೋರ್ವ ಸಲಹೆಗಾರ ಡಾ. ಉದಯಕುಮಾರ್ ಸಂಘ ಸ್ಥಾಪನೆಯಾಗಿ ಕೇವಲ ಒಂದು ವರ್ಷದಲ್ಲಿಯೇ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಸೋಮವಾರಪೇಟೆ ಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಸಾವಿರಾರು ಮಂದಿ ಪ್ರಯೋಜನ ಪಡೆದುಕೊಂಡಿ ದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ಡಿ. ಪ್ರಕಾಶ್ ಮಾತನಾಡಿ, ಸಮುದಾಯ ಬಾಂಧವರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಅಶಕ್ತರನ್ನು ಮೇಲೆತ್ತುವ ಕಾರ್ಯವನ್ನು ಸಂಘ ಮಾಡುತ್ತಿದೆ ಎಂದರು.
ಜೂ. 5 ರಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯಲಿರುವ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ರೂ. 5 ಸಾವಿರ ಧನ ಸಹಾಯ ನೀಡಲಾಗುವದು ಎಂದು ಅಧ್ಯಕ್ಷ ಪಿ.ಡಿ. ಪ್ರಕಾಶ್ ಹೇಳಿದರು.
ಸಂಘದ ಕಾರ್ಯದರ್ಶಿ ವಿನೋದ್ಕುಮಾರ್ ವಾರ್ಷಿಕ ವರದಿ ವಾಚಿಸಿದರೆ, ಖಜಾಂಚಿ ರಾಜನ್ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ವರದನ್, ಸಹಕಾರ್ಯದರ್ಶಿ ಶಿವದಾಸ್, ಸಂಘಟನಾ ಕಾರ್ಯದರ್ಶಿ ಗಂಗಾಧರ್, ಮಹಿಳಾ ಘಟಕದ ಕಾರ್ಯದರ್ಶಿ ಸುಜಾತ ಬಾಲಕೃಷ್ಣ, ಕಾನೂನು ಸಲಹೆಗಾರ ಪದ್ಮನಾಭ್ ಸೇರಿದಂತೆ ನಿರ್ದೇಶಕರುಗಳು ಉಪಸ್ಥಿತರಿದ್ದರು.