ಮಡಿಕೇರಿ, ಮೇ 26: ‘ಜನರಿಗೆ ಮನನ-ಜನರಿಗೆ ನಮನ’ ಸೌಲಭ್ಯ ವಿತರಿಸುವ ಮೈಸೂರು ವಿಭಾಗ ಮಟ್ಟದ ಸಮಾವೇಶ ಜೂನ್ 3 ರಂದು ಮೈಸೂರಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಸರ್ಕಾರದ ಪ್ರಮುಖ ಯೋಜನೆಗಳ ಫಲಾನುಭವಿಗಳನ್ನು ಮೈಸೂರಿಗೆ ಕರೆತರಲು ಅಗತ್ಯ ಸಿದ್ಧ್ದತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.
ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಅನ್ನಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಮನಸ್ವಿನಿ, ಮೈತ್ರಿ, ಬಿದಾಯಿ, ವಸತಿ ಭಾಗ್ಯ, ಪಶುಭಾಗ್ಯ, ಸೌರಭಾಗ್ಯ, ನಿರ್ಮಲ ಭಾಗ್ಯ, ಸಾಲ ಮನ್ನಾ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಅರ್ಹರಾದವರಿಗೆ ಸವಲತ್ತು ವಿತರಿಸುವ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಮುತುವರ್ಜಿ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆದುಕೊಂಡು ಬರುವ ಕಾರ್ಯವು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದ್ದು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಸರ್ಕಾರದ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರವು ನಾಲ್ಕು ವರ್ಷ ಪೂರ್ಣಗೊಳಿಸಿ ಐದನೇ ವರ್ಷದೆಡೆಗೆ ಸಾಗುತ್ತಿರುವ ಹಿನ್ನೆಲೆ ಸರ್ಕಾರದ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲಪಿಸುವ ನಿಟ್ಟಿನಲ್ಲಿ ‘ಜನರಿಗೆ ಮನನ-ಜನರಿಗೆ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
“ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ, ಅಪೌಷ್ಟಿಕತೆ ನಿವಾರಣೆಗಾಗಿ ಕ್ಷೀರಭಾಗ್ಯ, ಹೈನುಗಾರಿಕೆ ಉತ್ತೇಜನಕ್ಕಾಗಿ ಕ್ಷೀರಧಾರೆ, ಓದುವ ಕನಸಿಗೆ ನೆರವು ನೀಡಲು ವಿದ್ಯಾಸಿರಿ, ರೈತ ಸಮುದಾಯದ ಏಳಿಗೆಗೆ ಕೃಷಿಭಾಗ್ಯ, ಮಧ್ಯಮ ವರ್ಗದ ಬಡಜನರ ಉತ್ತಮ ಆರೋಗ್ಯಕ್ಕಾಗಿ ರಾಜೀವ್ ಆರೋಗ್ಯ ಭಾಗ್ಯ, ಹೊಸ ಬದುಕಿನ ಆಶಯಕ್ಕಾಗಿ ಸಾಲ ಮನ್ನಾ, ಗುಡಿಸಲು ರಹಿತ ರಾಜ್ಯ ಮಾಡುವ ನಿಟ್ಟಿನಲ್ಲಿ ವಸತಿ ಭಾಗ್ಯ, ಜಾನುವಾರು ಕಾಳಜಿಗಾಗಿ ಪಶುಭಾಗ್ಯ, 40 ವರ್ಷ ದಾಟಿದ ಮದುವೆಯಾಗದ ಮಹಿಳೆಯರಿಗಾಗಿ ಮನಸ್ವಿನಿ, ಲಿಂಗ ಅಲ್ಪಸಂಖ್ಯಾತರಿಗಾಗಿ ಮೈತ್ರಿ, ಗ್ರಾಮೀಣ ಪ್ರದೇಶದಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣಕ್ಕಾಗಿ ನಿರ್ಮಲ ಭಾಗ್ಯ ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಈ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಅವರು ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆದಕೊಂಡು ಹೋಗುವ ಸಂಬಂಧ ಸಲಹೆ ನೀಡಿದರು. ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಪೌರಾಯುಕ್ತೆ ಬಿ. ಶುಭ, ಜಿ.ಪಂ. ಉಪಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿದ್ದಲಿಂಗ ಮೂರ್ತಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸತ್ಯನ್, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ. ಸಿ. ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮಮ್ತಾಜ್, ಜಿ.ಪಂ. ಕಾರ್ಯಪಾಲಕ ಇಂಜಿನಿಯರ್ ರಾಜ್ಕುಮಾರ್ ರೆಡ್ಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕುಮಾರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್, ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ಬಿಸಿಎಂ ಇಲಾಖೆಯ ವ್ಯವಸ್ಥಾಪಕ ಪುಟ್ಟರಾಜು, ತಹಶೀಲ್ದಾರರಾದ ಕುಸುಮ, ಕೃಷ್ಣ, ಸಮಾಜ ಕಲ್ಯಾಣ, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಇತರರು ಹಲವು ಮಾಹಿತಿ ನೀಡಿದರು.