ಮಡಿಕೇರಿ, ಮೇ 26: ಸಂವಿಧಾನದ ಸಂರಕ್ಷಣೆಯೊಂದಿಗೆ ರಾಜಕೀಯ ಪಕ್ಷಗಳು ಮೌಲ್ಯಾಧಾರಿತ ರಾಜಕೀಯ ನಡೆಸಬೇಕೆಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಚಿಯಂಡಿರ ಕಿಶನ್ ಉತ್ತಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ದೀನ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪರವಾದ ಪಕ್ಷವಾಗಿದೆ ಎಂದು ಅವರು ಹೇಳಿದರು. ಸೆಪ್ಟೆಂಬರ್ ಕೊನೆ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಅಖಿಲೇಶ್ ಯಾಧವ್ 15 ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದು ಈ ಸಂದರ್ಭ ಬೆಂಗಳೂರು ಸೇರಿದಂತೆ ಮೈಸೂರು, ಚಿತ್ರದುರ್ಗ, ಶಿವಮೊಗ್ಗ ಇನ್ನಿತರ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಚಾಲನೆ ನೀಡಲಿದ್ದಾರೆ ಎಂದರು. ರಾಜ್ಯ ಮಹಿಳಾ ಅಧ್ಯಕ್ಷೆ ಶಾಂತ ಮೋಹನ್ ಮಾತನಾಡಿ ಕೊಡಗಿನಲ್ಲಿ ಮೌಲ್ಯಾಧಾರಿತ ರಾಜಕೀಯದ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ನಮ್ಮ ಪಕ್ಷವನ್ನು ಸಂಘಟಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದರು. ವೇದಿಕೆಯಲ್ಲಿ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರಾಜ್ಯಾಧ್ಯಕ್ಷೆ ಸುಗುಣ ತ್ಯಾಗನೂರು, ರಾಜ್ಯ ಸಮಿತಿ ಸದಸ್ಯ ಕುಮಾರ್ ಮತ್ತು ಜಿಲ್ಲಾ ಸಮಿತಿಯ ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.