ಸೋಮವಾರಪೇಟೆ,ಮೇ.27: ಯುವತಿಯನ್ನು ಬಲಾತ್ಕಾರವಾಗಿ ಅಪಹರಿಸಿ ಅಕ್ರಮವಾಗಿ ಗೃಹಬಂಧನದಲ್ಲಿರಿಸಿದ ಆರೋಪದ ಮೇರೆ ಯುವಕನೋರ್ವನಿಗೆ ಸೋಮವಾರಪೇಟೆ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಹೊಸಬೀಡು ಗ್ರಾಮದ ಯುವತಿಯನ್ನು ಬಲಾತ್ಕಾರವಾಗಿ ಅಪಹರಿಸಿ ಕೊಡ್ಲಿಪೇಟೆ ಸೇರಿದಂತೆ ಇತರೆಡೆಗಳಿಗೆ ಕರೆದೊಯ್ದು ಅಕ್ರಮವಾಗಿ ಗೃಹಬಂಧನದಲ್ಲಿರಿಸಿ, ಮದುವೆಯಾಗದಿದ್ದರೆ ಕೊಲೆ ಮಾಡುವದಾಗಿ ಬೆದರಿಕೆ ಒಡ್ಡಿದ ಬಗ್ಗೆ ದೊರೆತ ದೂರಿನ ಮೇರೆಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಆರೋಪಿ ಕೊಡ್ಲಿಪೇಟೆಯ ಭರತ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಳೆದ 49 ದಿನಗಳ ಹಿಂದೆ ಹೊಸಬೀಡು ಗ್ರಾಮದ ಯುವತಿಯನ್ನು ಆರೋಪಿ ಭರತ್ ಮತ್ತು ಆತನ ಸ್ನೇಹಿತ ಜಾನ್ಸನ್ ಅಪಹರಿಸಿ ಕೊಡ್ಲಿಪೇಟೆಗೆ ಕರೆದೊಯ್ದಿದ್ದರು ಎನ್ನಲಾಗಿದೆ. ಮದುವೆಯಾಗದಿದ್ದರೆ ಕೊಲೆ ಮಾಡುವದಾಗಿ ಬೆದರಿಸಿ ನಂತರ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಯುವತಿಯನ್ನು ಶುಕ್ರವಾರಸಂತೆಯ ಕಾಮನಹಳ್ಳಿ ಎಂಬಲ್ಲಿಗೆ ಕರೆದೊಯ್ದ ಸಂದರ್ಭ ಯುವತಿ ಪಕ್ಕದ ಮನೆಯವರ ಮೊಬೈಲ್‍ನಿಂದ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಇಲ್ಲಿನ ಪೊಲೀಸರ ಸಹಕಾರದಿಂದ ಕಾಮನಹಳ್ಳಿಗೆ ತೆರಳಿ ಸಂತ್ರಸ್ಥೆ ಯುವತಿ ಸೇರಿದಂತೆ ಆರೋಪಿ ಭರತ್‍ನನ್ನು ಠಾಣೆಗೆ ಕರೆತರಲಾಗಿತ್ತು.
ಘಟನೆಯ ಬಗ್ಗೆ ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ ಮೇರೆಗೆ ಪೊಲೀಸರು ಆರೋಪಿ ಭರತ್, ಸ್ನೇಹಿತ ಜಾನ್ಸನ್ ವಿರುದ್ಧ ಅಪಹರಣ, ಅಕ್ರಮ ಗೃಹಬಂಧನ, ಮಾನಭಂಗಕ್ಕೆ ಯತ್ನ ಪ್ರಕರಣದಡಿ ಮೊಕದ್ದಮೆ ದಾಖಲಿಸಿಕೊಂಡು, ಬಂಧಿತ ಭರತ್‍ನನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿರುವ ಪೊಲೀಸ್ ಠಾಣಾಧಿಕಾರಿ ಶಿವಣ್ಣ ಅವರು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.