ಮಡಿಕೇರಿ, ಮೇ 26: ಹಿಂದೆ ದೇಶದ ಬಗ್ಗೆ ಜನತೆಯಲ್ಲಿ ಅಪಾರ ಗೌರವವಿತ್ತು. ಇಂದು ನಮ್ಮ ಜನರಲ್ಲಿ ರಾಷ್ಟ್ರಪ್ರೇಮಿ ಕಡಿಮೆಯಾಗುತ್ತಿದೆ. ನಮ್ಮ ರಾಷ್ಟ್ರಪ್ರೇಮವನ್ನು ಇಂದು ನಾವು ಗಣರಾಜ್ಯೋತ್ಸವ ಹಾಗೂ ಸ್ವಾಂತತ್ರ್ಯೋತ್ಸವದ ಆಚರಣೆಗಳಲ್ಲಿ ಮಾತ್ರ ಕಾಣುವಂತಾಗಿರುವದು ವಿಷಾದನೀಯ ಎಂದು ಬ್ರಿಗೇಡಿಯರ್ ಎನ್.ಎನ್. ಮಾದಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂತೋಷ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸ್ತುತ ದಿನದಲ್ಲಿ ಭಾರತ್ ಮಾತಕಿ ಜೈ ಎಂಬ ಘೋಷಣೆಯನ್ನು ಕೇವಲ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಆಚರಣೆ ಸಂದರ್ಭ ಮಾತ್ರ ಕೇಳುವಂತಹ ಸನ್ನಿವೇಶ ಎದುರಾಗಿದೆ. ಆದರೆ ಇವುಗಳ ನಡುವೆಯೂ ಸುಪ್ರೀಂಕೋರ್ಟ್ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಸಾರಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಿ ತೀರ್ಪು ಹೊರಡಿಸಿರುವದು ಸ್ವಾಗತಾರ್ಹ ಎಂದು ಹೇಳಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಹಳೆ ವಿದ್ಯಾರ್ಥಿ ಸಂಘ ಕಾಲೇಜು ಅಭ್ಯುದಯದ ದೃಷ್ಠಿಕೋನದಿಂದ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಹಳೆ ವಿದ್ಯಾರ್ಥಿಗಳು ಸಂಘದ ಸದಸ್ಯತ್ವನ್ನು ಪಡೆದು ಕೊಳ್ಳಬೇಕು. ಯುವಕ, ಯುವತಿಯರು ಸಂಘದ ಸದಸ್ಯತ್ವ ಪಡೆದುಕೊಂಡು ಸಂಘವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದ ಹೇಳಿದರು. ಸಂಘ ಹೊರತಂದ ನ್ಯೂಸ್ ಲೆಟರ್ ಬಿಡುಗಡೆ ಮಾಡಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ವಿದ್ಯಾರ್ಥಿ ಸಂಘ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವದರ ಮೂಲಕ ಕಾಲೇಜು ಅಭಿವೃದ್ಧಿಗೆ ನೆರವು ನೀಡತ್ತಿದೆ ಎಂದು ಹೇಳಿದರು.

ಸಂಘದ ವಾರ್ಷಿಕ ಸಂತೋಷ ಕೂಟದ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲರ ಅನುಮತಿಯೊಂದಿಗೆ ಕಾಲೇಜಿನ ಹಿಂಭಾಗದಲ್ಲಿ ಸುಮಾರು ಇನ್ನೂರು ಅಡಿ ಉದ್ದ ಹಾಗೂ ಐವತ್ತು ಅಡಿ ವಿಸ್ತೀರ್ಣದ ಪ್ರದೇಶದಲ್ಲಿ 25ಕ್ಕೂ ಅಧಿಕ ಹಣ್ಣು ಗಿಡಗಳನ್ನು ನೆಡಲಾಯಿತು.

ಅತಿಥಿಗಳು ಸಾಂಕೇತಿಕವಾಗಿ ವಿವಿಧ ಜಾತಿಯ ಹಣ್ಣು ಗಿಡಗಳನ್ನು ನೆಟ್ಟರು. ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಎನ್‍ಸಿಸಿಯಲ್ಲಿ ಆರ್‍ಡಿ ಪೆರೇಡ್‍ನಲ್ಲಿ ಪಾಲ್ಗೊಂಡ ವಿದ್ಯಾರ್ಥಿ ಹಾಗೂ ಕ್ರೀಡೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ ಆಟಗಾರ್ತಿಯರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಿಗಾಗಿ ಹಲವು ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯರು ಸೇರಿದಂತೆ ಪ್ರತಿಯೊಬ್ಬರೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಮಾಜಿ ಸಚಿವ ಯಂ.ಸಿ. ನಾಣಯ್ಯ, ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಸಂಘದ ಮಾಜಿ ಅಧ್ಯಕ್ಷ ಎನ್.ಎ. ಅಪ್ಪಯ್ಯ, ಪದಾಧಿಕಾರಿಗಳಾದ ಶ್ಯಾಂ ಪೂಣಚ್ಚ ಮತ್ತಿತರರು ಹಾಜರಿದ್ದರು.