ವೀರಾಜಪೇಟೆ, ಮೇ 27: ಗ್ರಾಮಾಂತರ ಪ್ರದೇಶದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸಿ ಉತ್ತೇಜಿಸಿದರೆ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲೂ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಾಧ್ಯ ಎಂದು ಕೊಡಗು ಮುಸ್ಲಿಂ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಹೆಚ್. ಮೊೈನುದ್ದೀನ್ ಹೇಳಿದರು.
ಕೊಡಗು ಮುಸ್ಲಿಂ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೊೈನುದ್ದೀನ್, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಉತ್ತಮ ಭವಿಷ್ಯದತ್ತ ಕೊಂಡೊಯ್ಯಲಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಆರ್. ಮೊಹ್ಮದ್ ಸುಹೇಬ್ ಮಾತನಾಡಿ, ಕೊಡಗು ಮುಸ್ಲಿಂ ಸಹಕಾರ ಸಂಘ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದೆ ಎಂದು ಹೇಳಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿ ಮೊಹಮ್ಮದ್ ಜಯೀದ್ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ ಲುಬ್ನ ತರನ್ನುಂ ಇವರುಗಳನ್ನು ಸನ್ಮಾನಿಸಲಾಯಿತು. ಈ ಇಬ್ಬರು ಸಂತ ಅನ್ನಮ್ಮ ಸಂಸ್ಥೆ ವಿದ್ಯಾರ್ಥಿಗಳು.
ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಕನ್ನಡಿಯಂಡ ಎ. ಜುಬೇರ್, ನಿರ್ದೇಶಕಿ ತಸ್ನಿಂ ಅಕ್ತರ್ ಹಾಗೂ ಸಂಘದ ನಿರ್ದೇಶಕರು, ಸಂಘದ ವ್ಯವಸ್ಥಾಪಕ ಮುಕ್ತಾರ್ ಅಹಮ್ಮದ್, ಸಿಬ್ಬಂದಿಗಳು ಉಪಸ್ಥಿತರಿದ್ದರು.