ಗೋಣಿಕೊಪ್ಪಲು, ಮಾ 26: ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದ ಬಡ ಕುಟುಂಬಗಳು ಸಮಾಜದಲ್ಲಿ ಉತ್ತಮವಾಗಿ ಬದುಕಲು ಸಾಧ್ಯವಾಗಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.ಹಾತೂರು ಪಂಚಾಯಿತಿಯಲ್ಲಿ ನಡೆದ ಅಡುಗೆ ಅನಿಲ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಬಡ ಕೂಲಿ ಕಾರ್ಮಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇಂದಿಗೂ ಅವರು ಹೊಗೆ ನಡುವೆ ಬದುಕು ಸಾಗಿಸುತ್ತಿದ್ದಾರೆ. ಇದರ ಪ್ರಯೋಜನವನ್ನು ಜಿಲ್ಲೆಯ ಅಡುಗೆ ಅನಿಲ ರಹಿತ ಕುಟುಂಬಗಳು ಪಡೆದುಕೊಳ್ಳಬೇಕು. ಸರ್ಕಾರ ನೀಡಿರುವ ಅಡುಗೆ ಅನಿಲವನ್ನು ಮಾರಾಟ ಮಾಡದೇ ಸದ್ಬಳಕೆ ಮಾಡಿಕೊಳ್ಳಿ ಎಂದರು.

ಗ್ರಾ.ಪಂ. ಸದಸ್ಯೆ ರೂಪಾ ಭೀಮಯ್ಯ ಮಾತನಾಡಿ, ಹಾತೂರು ಗ್ರಾ.ಪಂ. ವ್ಯಾಪ್ತಿಯ ಕೊಲ್ತೋಡು ಗಿರಿಜನ ಹಾಡಿಯ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸುವಂತೆ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಅವರಿಗೆ ಮನವಿ ಮಾಡಿದರು.

ಹಾತೂರು ಗ್ರಾ.ಪಂ. ವ್ಯಾಪ್ತಿಯ 6 ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಮಾಡಲಾಯಿತು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಆಶಲತಾ, ಹಾತೂರು ವಲಯ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ, ಕಾಂಗ್ರೆಸ್ ಮುಖಂಡ ಕೊಕ್ಕೇರ ಕಾವೇರಪ್ಪ, ಕಡೇಮಾಡ ಅಶೋಕ್ ಚಿಟ್ಟಿಯಪ್ಪ, ಮಾಂಗೇರ ಪೊನ್ನಪ್ಪ, ಸುಗಂಧ ಇದ್ದರು.