ಮಡಿಕೇರಿ, ಮೇ 26: ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮಾಜಿ ಸಂಸದ ಹೆಚ್. ವಿಶ್ವನಾಥ್ ನಿರ್ಧಾರವನ್ನು ಖಂಡಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮನ್ನು ಕಡೆಗಣಿಸಿದ್ದಾರೆ ಎನ್ನುವ ಕಾರಣ ನೀಡಿ ಪಕ್ಷ ತೊರೆಯಲು ಮುಂದಾಗಿರುವ ವಿಶ್ವನಾಥ್ಗೆ ಯಾವ ರೀತಿಯ ಕಡೆಗಣನೆಯಾಗಿದೆ ಎನ್ನುವದನ್ನು ಸಾಬೀತುಪಡಿಸಲಿ ಎಂದು ಸವಾಲೆಸೆದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಕರೆತಂದಿದ್ದೇನೆಂದು ವಿಶ್ವನಾಥ್ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಬಾರದೆ ಇದ್ದಿದ್ದರೆ ಇಂದು ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಿರಲಿಲ್ಲವೆಂದು ಎ.ಕೆ. ಸುಬ್ಬಯ್ಯ ಅಭಿಪ್ರಾಯಪಟ್ಟರು. ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರÉಸ್ ಸೋಲಬೇಕೆಂದು ವಿಶ್ವನಾಥ್ ಅಪಪ್ರಚಾರದಲ್ಲಿ ತೊಡಗಿದ್ದರೆಂದು ಆರೋಪಿಸಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವಾದ ಜೆಡಿಎಸ್ಗೆ ಸೇರ್ಪಡೆಗೊಳ್ಳಲು ವಿಶ್ವನಾಥ್ ಮುಂದಾಗಿರುವದು ಅತ್ಯಂತ ಹೀನಾಯ ನಡೆ ಎಂದರು.
ಜೆಡಿಎಸ್ನಲ್ಲಿ ಅಪ್ಪ ಮಕ್ಕಳು ಹೇಳಿದಂತೆ ಕೇಳದವರಿಗೆ ಬೆಲೆಯೇ ಇಲ್ಲವೆಂದು ಎ.ಕೆ.ಸುಬ್ಬಯ್ಯ ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ರಾಜಕೀಯ ನಿರ್ಧಾರವನ್ನು ಟೀಕಿಸಿದ ಸುಬ್ಬಯ್ಯ, ತಮ್ಮ ಅಳಿಯನ ರಕ್ಷಣೆಗಾಗಿ ಬಿಜೆಪಿಗೆ ಸೇರ್ಪಡೆಯಾದರು ಎಂದು ಆರೋಪಿಸಿದರು.
ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದುದನ್ನು ಸಹಿಸದ ಅನೇಕರು ಪಕ್ಷಾತೀತವಾಗಿ ಸರ್ಕಾರವನ್ನು ವಿಫಲಗೊಳಿಸಲು ಯತ್ನಿಸಿದರು. ಆದರೆ, ಇದೆಲ್ಲವನ್ನು ಮೀರಿ ಸಿದ್ದರಾಮಯ್ಯ ಅವರು, ಜನಪರ ನಿಲುವುಗಳನ್ನು ತೆಗೆದು ಕೊಂಡಿದ್ದಾರೆ ಎಂದು ಸುಬ್ಬಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.