*ಗೋಣಿಕೊಪ್ಪ, ಮೇ 27: ರಾಯಲ್ ಕ್ರಿಕೆಟ್ ಕ್ಲಬ್ ಟಿ.ಶೆಟ್ಟಿಗೇರಿ ಹಾಗೂ ಕೈಬುಲಿರ ಬೋಪಯ್ಯನವರ ಜ್ಞಾಪಕಾರ್ಥ ಅವರ ಪತ್ನಿ ಪಾರ್ವತಿ ಸಹಯೋಗಿತ್ವದಲ್ಲಿ ಕಳೆದ ಮೂರು ದಿನಗಳಿಂದ ಟಿ.ಶೆಟ್ಟಿಗೇರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುವ ಎರಡನೇ ವರ್ಷದ ‘ಹಿಂದೂ ಮಾನ್ಸೂನ್’ ಕಪ್ ಹಾತೂರಿನ ವಿರಾಟ್ ಕ್ರಿಕೆಟರ್ಸ್ ಪಾಲಾಗಿದೆ.
ನಿನ್ನೆ ನಡೆದ ಅಂತಿಮ ಹಣಹಣಿಯಲ್ಲಿ ಹಾತೂರಿನ ವಿರಾಟ್ ಕ್ರಿಕೆಟರ್ಸ್ ಹಾಗೂ ವೀರಾಜಪೇಟೆಯ ಅಫೀಷಿಯಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಿದವು. ರೋಚಕ ಪಂದ್ಯದಲ್ಲಿ ನಾಯಕ ಸುಬ್ಬಯ್ಯ ಅವರ ಸಿಡಿಲಬ್ಬರದ 5 ಸಿಕ್ಸರ್‍ಗಳ ನೆರವಿನಿಂದ ಹಾತೂರು ಕ್ರಿಕೆಟರ್ಸ್ ತಂಡವು ನಿಗದಿತ 8 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 77 ರನ್‍ಗಳನ್ನು ಗಳಿಸಿತು. 78 ರನ್‍ಗಳ ಗೆಲುವಿನ ಗುರಿಯೊಂದಿಗೆ ದಾಳಿಗಿಳಿದ ಅಫೀಷಿಯಲ್ಸ್ ತಂಡವು ಕೇವಲ 5.4 ಓವರ್‍ಗಳಲ್ಲಿ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 26 ರನ್‍ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ವಿನ್ನರ್ಸ್ ತಂಡಕ್ಕೆ ಟ್ರೋಫಿ ಯೊಂದಿಗೆ 15 ಸಾವಿರ ರೂ.ಗಳ ನಗದು ಹಾಗೂ ರನ್ನರ್ಸ್ ತಂಡಕ್ಕೆ ಟ್ರೋಫಿಯೊಂದಿಗೆ 10 ಸಾವಿರ ರೂ.ಗಳ ನಗದನ್ನು ನೀಡಲಾಯಿತು. ಉತ್ತಮ ಬೌಲರ್ ಆಗಿ ಹರಿಹರ ತಂಡದ ಮಹೇಶ್, ಅತ್ಯುತ್ತಮ ಬ್ಯಾಟ್ಸ್‍ಮನ್ ಆಗಿ ವಿರಾಟ್‍ತಂಡದ ಸುಬ್ಬಯ್ಯ ಹಾಗೂ ಸರಣಿ ಪುರುಷೋತ್ತಮನಾಗಿ ವಿರಾಟ್ ತಂಡದ ಅಲೋಕ್ ಗೌಡ ಹೊರಹೊಮ್ಮಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಎಸ್‍ಡಿಎಂಸಿ ಅಧ್ಯಕ್ಷ ಉಳುವಂಗಡ ದತ್ತ, ಸದಸ್ಯ ಅಪ್ಪಂಚಂಗಡ ಮೋಟಯ್ಯ, ರಾಯಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಚೊಟ್ಟೆಯಾಂಡಮಾಡ ಅನಿಲ್, ವಿರಾಟ್ ಕ್ರಿಕೆಟರ್ಸ್ ತಂಡದ ಮೇಲ್ವಿಚಾರಕ ವಿ.ಸಿ. ಸುದೀಪ್, ವಿ.ಎನ್. ಮಹೇಶ್, ಕೋಚ್ ರೋಷನ್ ಕಾಳಪ್ಪ ಉಪಸ್ಥಿತರಿದ್ದರು.