ಸೋಮವಾರಪೇಟೆ, ಮೇ 28: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಅಮಲು ಪದಾರ್ಥಕ್ಕೆ ಬಲಿಬಿದ್ದು, ಈಗಾಗಲೇ ಕೆಲ ಯುವಕರು ಮಾನಸಿಕ ಸ್ಥಿಮಿತ ಕಳೆದುಕೊಂಡು ನಗರದಲ್ಲಿ ಅಲೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಪಡ್ಡೆಗಳೇ ಗಾಂಜಾ ಗಿರಾಕಿಗಳಾಗುತ್ತಿದ್ದಾರೆ.

ನಗರದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿನ ವ್ಯಕ್ತಿಯೋರ್ವ ಗಾಂಜಾ ಮಾರಾಟದ ಮಾಸ್ಟರ್ ಪಿನ್ ಆಗಿದ್ದು, ದಯವಿಟ್ಟು ನಮ್ಮ ಗ್ರಾಮದ ಹೆಸರನ್ನು ಪತ್ರಿಕೆಯಲ್ಲಿ ಬರೆಯಬೇಡಿ ಎಂದು ಆ ಗ್ರಾಮದ ಪ್ರಜ್ಞಾವಂತರು ‘ಶಕ್ತಿ’ಯೊಂದಿಗೆ ಮನವಿ ಮಾಡಿದ್ದಾರೆ.

ಗ್ರಾಮದಲ್ಲಿ ಅಂಗಡಿಯನ್ನಿಟ್ಟುಕೊಂಡಿರುವ ವ್ಯಕ್ತಿಯೋರ್ವ ನಿಷೇಧಿತ ಗಾಂಜಾವನ್ನು ನಿರಾತಂಕವಾಗಿ ಮಾರಾಟ ಮಾಡುತ್ತಿದ್ದಾನೆ. ಈ ಬಗ್ಗೆ ಹಲವಷ್ಟು ಬಾರಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ. ಪೊಲೀಸರು ಹಾಗೂ ಗಾಂಜಾ ಮಾರಾಟಗಾರನ ನಡುವೆ ಒಪ್ಪಂದ ಏರ್ಪಟ್ಟಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಗ್ರಾಮಸ್ಥರು ಅನುಮಾನಿಸುತ್ತಿದ್ದಾರೆ.

ಸೋಮವಾರಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿರುವ ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿ ಅಕ್ಕಿ, ಬೇಳೆ ಸೇರಿದಂತೆ ಇನ್ನಿತರ ದಿನಸಿ ಸಾಮಗ್ರಿಗಳ ಜತೆಯಲ್ಲಿ ಗಾಂಜಾವನ್ನು ಆಯ್ದ ಕೆಲವರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರೇ ಮಾಹಿತಿ ನೀಡಿದ್ದಾರೆ. ರಾತ್ರಿಯಾಗುತ್ತಲೇ ಈತನ ಅಂಗಡಿಗೆ ಹತ್ತಾರು ಯುವಕರು ಬೈಕ್‍ನಲ್ಲಿ ಬಂದು ‘ಪದಾರ್ಥ’ ಖರೀದಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಸೋಮವಾರಪೇಟೆ ನಗರ ವ್ಯಾಪ್ತಿಯಲ್ಲಿರುವ ಕೆಲ ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲ ಪಡ್ಡೆ ಹುಡುಗರು ಈತನಿಗೆ ಪ್ರತಿನಿತ್ಯದ ಗಿರಾಕಿಗಳಾಗಿದ್ದು, ಸಂಜೆಯಾಗುತ್ತಲೇ ಇಲ್ಲಿನ ಜೂನಿಯರ್ ಕಾಲೇಜು ಹಿಂಭಾಗ ಗಾಂಜಾ ಸೇದುವವರ ಅಡ್ಡೆಯಾಗಿ ಪರಿವರ್ತನೆಯಾಗಿದೆ ಎಂಬ ಆರೋಪ ಇಲ್ಲಿನವರಿಂದ ವ್ಯಕ್ತವಾಗಿದೆ.

ಈ ಅಡ್ಡೆಯ ಮೇಲೆ ಹಲವಷ್ಟು ಬಾರಿ ಪೊಲೀಸರು ಧಾಳಿ ನಡೆಸಿದ್ದರೂ ಸಹ ಕೈಗೆ ಯಾರೂ ಸಿಕ್ಕಿಲ್ಲ. ಇದಲ್ಲದೇ ಗಾಂಜಾ ಮಾರಾಟ ಮಾಡುವ ಅಂಗಡಿಯ ಮೇಲೆ ಧಾಳಿ ನಡೆಸಿದರೂ ಗಾಂಜಾ ಮಾತ್ರ ಲಭ್ಯವಾಗುವದಿಲ್ಲ. ಪೊಲೀಸರಿಗೆ ಲಭ್ಯವಾಗದ ಗಾಂಜಾ ಪಡ್ಡೆ ಹುಡುಗರಿಗೆ ಅದು ಹೇಗೆ ಸಿಗುತ್ತದೆ? ಎಂಬ ಯಕ್ಷ ಪ್ರಶ್ನೆ ಹಲವರದ್ದು.

ಕಳೆದ ಐದಾರು ವರ್ಷಗಳಿಂದ ಗಾಂಜಾ ಮಾರಾಟ ವ್ಯವಹಾರ ಇಲ್ಲಿ ನಡೆಯುತ್ತಿದ್ದು, ಪಡ್ಡೆಗಳಿಗೆ ಅಮಲೇರಿಸುವ ಕೇಂದ್ರವಾಗಿ ಮಾರ್ಪಟ್ಟಿದೆ. ನಗರದ ಮಾನಸ ಹಾಲ್ ಹಿಂಭಾಗ, ಜೂನಿಯರ್ ಕಾಲೇಜು ಹಿಂಭಾಗ ಮತ್ತು ಪಾಳು ಬೀಳುತ್ತಿರುವ ಶತಮಾನೋತ್ಸವ ಭವನದ ಬಳಿ, ಆರ್‍ಎಂಸಿ ಮಾರುಕಟ್ಟೆಯ ಸುತ್ತಮುತ್ತ ಗಾಂಜಾ ಸೇದುತ್ತಿದ್ದ ಪಡ್ಡೆಗಳನ್ನು ಹಲವು ಬಾರಿ ಸ್ಥಳೀಯರೇ ಓಡಿಸಿರುವ ಪ್ರಕರಣಗಳೂ ನಡೆದಿವೆ. ಗಾಂಜಾ ಅಮಲನ್ನು ನೆತ್ತಿಗೇರಿಸಿಕೊಳ್ಳುವ ಪಡ್ಡೆಗಳು ರಸ್ತೆಯಲ್ಲಿ ತೆರಳುವ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವ, ಬೇರೆಯವರಿಂದ ಒದೆತಿನ್ನುವ ಹಾಗೂ ಇನ್ನಿತರ ಅಪರಾಧ ಕೃತ್ಯಗಳಲ್ಲಿ ತೊಡಗುವ ಪ್ರಕರಣಗಳೂ ನಡೆದಿವೆ.

ನಿಷೇಧಿತ ಅಮಲು ಪದಾರ್ಥವನ್ನು ಮಾರಾಟ ಮಾಡಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ, ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುವ ಇಂತಹ ಅಡ್ಡೆಗಳ ವಿರುದ್ಧ ಪೊಲೀಸ್ ಕ್ರಮ ಅನಿವಾರ್ಯವಾಗಿದೆ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗಾಂಜಾವನ್ನು ಬೇರೆಡೆಯಿಂದ ತಂದು ಇಲ್ಲಿನ ಯುವಕರಿಗೆ ಮಾರಾಟ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಈ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಈತನೊಂದಿಗೆ ಇತರರೂ ಶಾಮೀಲಾಗಿರುವ ಶಂಕೆ ಇದ್ದು, ನಾವುಗಳು ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರೂ ಈತನೊಂದಿಗೆ ಶಾಮೀಲಾಗಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಕೆಲ ಸಮಯದಿಂದ ಯುವಕನೋರ್ವ ನಗರದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದು, ಈತನ ಸ್ಥಿತಿಗೆ ಗಾಂಜಾ ಸೇವನೆಯೇ ಕಾರಣ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ನಿಷೇಧಿತ ಗಾಂಜಾ ಮಾರಾಟಕ್ಕೆ ಕಡಿವಾಣ ಬೀಳಲೇಬೇಕಿದೆ. ಸೋಮವಾರಪೇಟೆಯಲ್ಲಿ ಪೊಲೀಸರಿದ್ದೂ ಸಹ ಇಂತಹ ಅಕ್ರಮ ನಿರಾತಂಕವಾಗಿ ನಡೆಯುತ್ತಿದೆ ಎಂದಾದರೆ..? ಅದು ಇಲಾಖೆಗೆ ಅವಮಾನವಲ್ಲದೇ ಮತ್ತೇನೂ ಅಲ್ಲ.., ಅಲ್ಲವೇ?

- ಸತ್ಯದೇವ್