ಆಲೂರು-ಸಿದ್ದಾಪುರ, ಮೇ 28: ಆಲೂರು-ಸಿದ್ದಾಪುರ ಗ್ರಾ.ಪಂ. ಸೇರಿದಂತೆ ಇತರ ಚುನಾಯಿತ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಶಕಗಳ ಹಿಂದೆ ನಿರ್ಮಾಣ ಮಾಡಿದ ಹಲವಾರು ಕಾಮಗಾರಿ ನೆನೆಗುದಿಗೆ ಬಿದ್ದಿರುವದು ಹಾಗೂ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ನ್ಯೂನತೆಗಳನ್ನು ಜಿಲ್ಲಾಡಳಿತ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಒಂದು ತಿಂಗಳ ಒಳಗಡೆ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಆಲೂರು-ಸಿದ್ದಾಪುರದ ಸಾರ್ವಜನಿಕರು ಎಚ್ಚರಿಸಿದ್ದಾರೆ.

ಈ ಕುರಿತು ಆಲೂರು-ಸಿದ್ದಾಪುರದ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಪತ್ರಿಕಾ ಹೇಳಿಕೆಯಲ್ಲಿ ಮಾಜಿ ತಾ.ಪಂ. ಸದಸ್ಯ ಸಿ.ಕೆ. ಚಂದ್ರಶೇಖರ್, ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪ್ರಯತ್ನದಿಂದಾಗಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ, ಅವರ ಪ್ರಯತ್ನದಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಸ್ಥಿತ್ವಕ್ಕೆ ಬಂದ ಹಲವಾರು ಸಂಸ್ಥೆಗಳು ಆಲೂರು-ಸಿದ್ದಾಪುರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಇದೀಗ ಆಲೂರು-ಸಿದ್ದಾಪುರದಲ್ಲಿ ಉತ್ತಮ ಕಟ್ಟಡವನ್ನೊಳಗೊಂಡ ಮೊರಾರ್ಜಿ ದೇಸಾಯಿ ಬಾಲಕ-ಬಾಲಕಿಯರ ವಸತಿ ಶಾಲೆ, ಸರ್ಕಾರಿ ಪ.ಪೂ. ಕಾಲೇಜು, ಸರಕಾರಿ ಪ್ರೌಢಶಾಲೆ, ಸರಕಾರಿ ಐಟಿಐ ಕೇಂದ್ರ, ಅವುಗಳಿಗೆ ಪೂರಕವಾಗುವ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಸತಿ ನಿಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಆಸ್ಪತ್ರೆ, 66 ಕೆ.ವಿ. ವಿದ್ಯುತ್ ಸರಬರಾಜು ಘಟಕ ಸೇರಿದಂತೆ ಸಹಕಾರ ಮತ್ತು ರಾಷ್ಟ್ರೀಕೃತ ಬಾಂಕ್‍ಗಳು, ಪೆಟ್ರೊಲ್ ಬಂಕ್ ಹಾಗೂ ಇತರ ಖಾಸಗಿ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದೆ ಎಂದರು. ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ಸ್ಥಳೀಯ ಗ್ರಾ.ಪಂ. ಜನಪ್ರತಿನಿಧಿಗಳು ಮೊದಲುಗೊಂಡು ಇತರ ಚುನಾಯಿತ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಲೂರು-ಸಿದ್ದಾಪುರದಲ್ಲಿ ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ. ಹೈಮಾಸ್ಟ್ ದೀಪ ಕಳೆದ 6 ವರ್ಷಗಳಿಂದ ಉರಿಯದೆ ನೆನೆಗುದಿಗೆ ಬಿದ್ದಿರುವದು, ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಮಿನಿ ಕ್ರೀಡಾಂಗಣದ ಕಾಮಗಾರಿ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವದು, ಅತ್ಯಂತ ವೇಗದಿಂದ ಚಲಿಸುತ್ತಿರುವ ವಾಹನಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿರುವದು, ಆಟೋ ನಿಲ್ದಾಣದ ವ್ಯವಸ್ಥೆ ಇಲ್ಲದಿರುವದು, ಅಂಗನವಾಡಿ ಕೇಂದ್ರವೊಂದರ ಕಟ್ಟಡಕ್ಕೆ ಹೊಂದಿಕೊಂಡಿರುವ ಶಿಥಿಲ ಕಟ್ಟಡವೊಂದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳದಿರುವದು ಹಾಗೂ ಗ್ರಾ.ಪಂ.ಯಿಂದ ಆಗಬೇಕಾದ ಕನಿಷ್ಟ ಅಭಿವೃದ್ಧಿ ಕಾರ್ಯಗಳು ನಡೆಯದಿಲ್ಲವೆಂದು ಆರೋಪಿಸಿದ್ದಾರೆ.

ಈ ನಿಟ್ಟಿನಲ್ಲಿ ಆಲೂರು-ಸಿದ್ದಾಪುರದ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಸಾರ್ವಜನಿಕರು ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿ, ಜಿ.ಪಂ.ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಹಾಗೂ ಸಂಬಂಧಪಟ್ಟ ಗ್ರಾ.ಪಂ. ಪಿಡಿಓ ಇವರುಗಳಿಗೆ ಮನವಿ ಪತ್ರ ನೀಡಿದ್ದಾರೆ. 1 ತಿಂಗಳ ಒಳಗಡೆ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.