ಸಿದ್ದಾಪುರ, ಮೇ 28 : ರಾಜ್ಯ ಸರಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಜಿಲ್ಲೆಯ ಪ್ರತಿಯೊಂದು ಮನೆಗೂ ತಲುಪಿಸುವ ಗುರಿಯೊಂದಿಗೆ ಐಎನ್‍ಟಿಯುಸಿ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಬೈಕ್ ಜಾಥಾವನ್ನು ಸಂಘಟನೆಯ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಉದ್ಘಾಟಿಸಿದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್.ಎಂ ಮತ್ತಪ್ಪ ನೇತೃತ್ವದಲ್ಲಿ ನೆಲ್ಯಹುದಿಕೇರಿ ಕಾವೇರಿ ಸೇತುವೆ ಬಳಿಯಿಂದ ಪ್ರಾರಂಭವಾದ ಬೈಕ್ ಜಾಥಾ ಮೂರು ದಿನಗಳ ಕಾಲ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಮೇ 30ರಂದು ಮಡಿಕೇರಿಯಲ್ಲಿ ಸಮಾರೋಪಗೊಳ್ಳಲಿದೆ. ಸರಕಾರದ ಜನಪರ ಯೋಜನೆಗಳಾದ ಕ್ಷೀರ ಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಕೃಷಿ ಭಾಗ್ಯ, ವಸತಿ ಭಾಗ್ಯ, ಸೌರ ಭಾಗ್ಯ, ಮನಸ್ವಿನಿ, ಪಶು ಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಪ್ರತಿಯೊಂದು ಮನೆಗೂ ತಲುಪಿಸುವ ಸಲುವಾಗಿ ಬೈಕ್ ಜಾಥಾವನ್ನು ಹಮ್ಮಿಕೊಂಡಿರುವದಾಗಿ ಎನ್.ಎಂ ಮುತ್ತಪ್ಪ ತಿಳಿಸಿದ್ದಾರೆ.

ಈ ಸಂದರ್ಭ ಐಎನ್‍ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ವೆಂಕಟೇಶ್, ಜಂಟಿ ಪ್ರಧಾನ ಕಾರ್ಯದರ್ಶಿ ಎನ್.ಎಂ ಮುದ್ದಪ್ಪ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ ಸದಸ್ಯೆ ಸುಹದಾ ಅಶ್ರಫ್, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಹಮೀದ್, ಮಹಿಳಾ ಅಧ್ಯಕ್ಷೆ ಗೀತಾ ಲಿಂಗಪ್ಪ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜಿತ್ ಕುಮಾರ್, ಪ್ರಮುಖರಾದ ಪಿ.ಸಿ ಹಸೈನಾರ್, ಉಸ್ಮಾನ್, ಎಂ.ಹೆಚ್ ಮೂಸಾ, ಎ.ಕೆ ಹಕೀಂ, ಯಾಕೂಬ್ ಮತ್ತಿತರರು ಇದ್ದರು. ಜಾಥಾದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಸ್ಕೂಟಿ ಓಡಿಸಿ ಗಮನ ಸೆಳಿದರು.