ಸೋಮವಾರಪೇಟೆ, ಮೇ 28: ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆ ಹರಾಜು ಪ್ರಕ್ರಿಯೆ ಸಂಬಂಧ ಪ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಸದಸ್ಯರೋರ್ವರು ಕೀಳುಮಟ್ಟದ ಪದ ಪ್ರಯೋಗ ಮಾಡಿದ್ದಾರೆ. ಇದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ಷೇಪಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಪಟ್ಟಣ ಪಂಚಾಯಿತಿಯ ಕೆಲ ಸದಸ್ಯರು ಅಭಿವೃದ್ಧಿ ಬಗೆಗಿನ ಚಿಂತನೆ ಬಿಟ್ಟು ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಇದರಿಂದಾಗಿ ನಗರದ ಅಭಿವೃದ್ಧಿ ಕುಂಠಿತಗೊಂಡು ಸಮಸ್ಯೆ ತಾಂಡವವಾಡುತ್ತಿದೆ ಎಂದು ದೂರಿದರು.

ಪ.ಪಂ. ಮಳಿಗೆ ಹರಾಜಿನಲ್ಲಿ ತಾಂತ್ರಿಕದೋಷ ಎದುರಾಗಿದ್ದರಿಂದ ಅದನ್ನು ಪಡೆದವರು ಕಾನೂನಿನ ಮೊರೆ ಹೋಗಲು ನಿರ್ಧರಿಸಿದ್ದರು. ಈ ಸಂದರ್ಭ ಪಂಚಾಯಿತಿ ಆಡಳಿತ ಮಂಡಳಿ ಮಾತುಕತೆ ನಡೆಸಿ ನಿಗದಿತ ಬಾಡಿಗೆ ವಿಧಿಸಿ ಮಳಿಗೆಯನ್ನು ನೀಡಿದ್ದಾರೆ. ಆದರೆ ಪಂಚಾಯಿತಿಯ ಸದಸ್ಯರೋರ್ವರು ಜ್ಞಾನದ ಕೊರತೆಯಿಂದ ಸಾಮಾನ್ಯ ಸಭೆಯಲ್ಲಿ ‘ರೋಲ್‍ಕಾಲ್’ ಮಾಡುವವರು ಎಂದು ಜರಿದಿದ್ದಾರೆ. ಇದು ಖಂಡನೀಯ ಎಂದರು.

ಮಳಿಗೆಯನ್ನು ಬಾಡಿಗೆ ಪಡೆದಿರುವ ವ್ಯಕ್ತಿ ‘ರೋಲ್‍ಕಾಲ್’ ಮಾಡುತ್ತಿದ್ದರೆ ಅದನ್ನು ಸಾಬೀತುಪಡಿಸಲಿ. ಇದನ್ನು ಬಿಟ್ಟು ಸಾಮಾನ್ಯ ಸಭೆಯಲ್ಲಿ ಅಗೌರವಯುತ ಮಾತುಗಳನ್ನು ಆಡುವದು ಶೋಭೆ ತರುವದಿಲ್ಲ ಎಂದು ಅಭಿಪ್ರಾಯಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ನಗರಾಧ್ಯಕ್ಷ ಮಂಜುನಾಥ್, ಸಾಹಿತ್ಯ ಘಟಕದ ಅಧ್ಯಕ್ಷ ಸುದರ್ಶನ್, ಸಂಚಾಲಕಿ ದೀಪಿಕಾ ಅವರುಗಳು ಉಪಸ್ಥಿತರಿದ್ದರು.