ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯಿತಿ ಹಾಗೂ ತಾಜ್ ವಿವಂತ ಸಂಯುಕ್ತ ಆಶ್ರಯದಲ್ಲಿ ಮಾಂದಲಪಟ್ಟಿಯಲ್ಲಿಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ನಂಜರಾಯಪಟ್ಟಣ: ಜಿಲ್ಲಾ ಪಂಚಾಯಿತಿ ಮತ್ತು ಸ್ವಚ್ಛ ಭಾರತ್ ಮಿಷನ್ ಹಾಗೂ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ದುಬಾರೆ ಪ್ರವಾಸಿ ತಾಣದಲ್ಲಿ ಸ್ವಚ್ಛ ಭಾರತ್ ಮಿಷನ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ನಂಜರಾಯಪಟ್ಟಣ ಗ್ರಾ.ಪಂ. ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು ಫ್ಲೆಕಾರ್ಡ್ ಹಿಡಿದು ಮೆರವಣಿಗೆ ನಡೆಸುವ ಮೂಲಕ ಜನರ ಗಮನ ಸೆಳೆದರು. ಅಲ್ಲದೆ ಮೆರವಣಿಗೆ ಸಂದರ್ಭ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಎಲ್ಲೆಂದರಲ್ಲಿ ಕಸ ಹಾಕಬೇಡಿ, ಸ್ವಚ್ಛತೆ ಕಾಪಾಡಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭ ಪ್ರವಾಸಿಗರಿಗೆ, ಅಂಗಡಿಗಳಿಗೆ ಹಾಗೂ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಲಾಯಿತು. ತಾ.ಪಂ. ಸದಸ್ಯ ವಿಜು ಚಂಗಪ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ಜೈನಬಾ, ಅಭಿವೃದ್ಧಿ ಅಧಿಕಾರಿ ಸಿ.ಕೆ. ರಾಜೇಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್.ಬಿ. ಮೂರ್ತಿ, ರ್ಯಾಫ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಸಿ.ಎಲ್. ವಿಶ್ವ, ರಂಜಿತ್, ನೋಡಲ್ ಅಧಿಕಾರಿ ಪೆಮ್ಮಯ್ಯ ಮತ್ತಿತರರು ಇದ್ದರು.

ಕರಿಕೆ: ತಾ. 29 ರಂದು ಗ್ರಾಮದ ಸ್ವಚ್ಛತಾ ದಿನವಾಗಿ ಆಚರಿಸಲು ಎಲ್ಲಾ ಗ್ರಾಮಸ್ಥರು ತಮ್ಮ ಮನೆ, ಕಟ್ಟಡ, ಕೊಟ್ಟಿಗೆ ಇತ್ಯಾದಿಗಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂಗಡಿ ಮುಂಗಟ್ಟುಗಳ ಸುತ್ತಲೂ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ಪೂರ್ವಾಹ್ನ 9 ಗಂಟೆಯಿಂದ ಅಪರಾಹ್ನ 2 ಗಂಟೆವರೆಗೆ ಕರಿಕೆ ಗ್ರಾಮದ ಆಯಾ ವಾರ್ಡ್‍ಗಳಲ್ಲಿ ಪ್ರತ್ಯೇಕ ತಂಡವಾಗಿ ಗ್ರಾಮಸ್ಥರು, ಜನಪ್ರತಿನಿಧಿಗಳು, ಸರಕಾರಿ, ಅರೆ ಸರಕಾರಿ ನೌಕರರು, ಸಂಘ-ಸಂಸ್ಥೆಗಳು ಸೇರಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ.

ಹೆಬ್ಬಾಲೆ: ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛ ಕೊಡಗು ಅಭಿಯಾನವನ್ನು ಹಮ್ಮಿಕೊಂಡಿದ್ದು, ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಅಭಿಯಾನಕ್ಕೆ ಚಾಲನೆ ನೀಡಿದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಕೇಶ್ ಮಾತನಾಡಿ, ಸ್ವಚ್ಛತೆ ಕಾಪಾಡಲು ಗ್ರಾಮಸ್ಥರ ಸಹಕಾರ ಇದ್ದಲ್ಲಿ ಗ್ರಾಮದ ಪ್ರಗತಿ ಸಾಧ್ಯ ಎಂದರು. ಹೆಬ್ಬಾಲೆ ಗ್ರಾ.ಪಂ. ಸದಸ್ಯರುಗಳು, ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ, ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಶ್ರೀ ರಾಮಲಿಂಗೇಶ್ವರ ದೇವಾಲಯ ಮತ್ತು ನದಿಯ ತಟದಲ್ಲಿ ಶ್ರಮದಾನ ಮಾಡುವ ಮೂಲಕ ಅಭಿಯಾನಕ್ಕೆ ಕೈಜೋಡಿಸಿದರು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್, ಗ್ರಾ.ಪಂ. ಸದಸ್ಯರುಗಳಾದ ಶಿವನಂಜಪ್ಪ, ದೇವಮ್ಮ ಮತ್ತಿತರರು ಇದ್ದರು.