ಸೋಮವಾರಪೇಟೆ, ಮೇ 28: ತಾಲೂಕು ಕೇಂದ್ರದಿಂದ ಗಡಿ ಭಾಗದ ಗ್ರಾಮಗಳಾದ ಹರಗ, ಕಿಕ್ಕರಳ್ಳಿ, ಸೂರ್ಲಬ್ಬಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ನಿರ್ಮಿಸಲಾಗಿರುವ ಸೇತುವೆ ಯೊಂದು ಶಿಥಿಲಾವಸ್ಥೆಗೆ ತಲುಪಿ ಹಲವು ದಶಕಗಳೇ ಕಳೆದಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳ ಕಣ್ಣು ಕುರುಡಾಗಿರುವಂತೆ ಕಂಡುಬರುತ್ತಿದೆ. ಸೇತುವೆಯ ಎರಡೂ ಬದಿಯ ತಡೆಗೋಡೆ ಈಗಾಗಲೇ ಹೊಳೆ ಪಾಲಾಗಿದ್ದು, ಅತ್ಯಂತ ದುಸ್ಥಿತಿಯಲ್ಲಿರುವ ಸೇತುವೆ ಕುಸಿಯಲು ದಿನಗಣನೆ ಆರಂಭವಾಗಿದೆ.

ಹರಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು 1949ರಲ್ಲಿ ಕೊಡಗು ಸರ್ಕಾರವಿದ್ದ ಸಂದರ್ಭ ನಿರ್ಮಿಸಲಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ದೊಡ್ಡಮನೆ ಕಾಳಪ್ಪ ಎಂಬವರು ಗುತ್ತಿಗೆ ಪಡೆದು ಕಾಮಗಾರಿ ನಿರ್ವಹಿಸಿದ್ದರು. ಇದಾದ ನಂತರ ಇದುವರೆಗೂ ಈ ಸೇತುವೆಯನ್ನು ದುರಸ್ತಿಗೊಳಿಸಲು ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ.

ಇದೇ ಸೇತುವೆ ಮೂಲಕ ಹರಗ, ಕಿಕ್ಕರಳ್ಳಿ, ಚಾಮೇರ ಮನೆಗೆ ತೆರಳಬಹುದಾಗಿದ್ದು, ಪ್ರಸ್ತುತ ಸೇತುವೆ ಯಾವ ಸಂದರ್ಭದಲ್ಲಾದರೂ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಪ್ರತಿನಿತ್ಯ ಮೂರು ಬಸ್‍ಗಳೂ ಸೇರಿದಂತೆ ನೂರಾರು ಲಘು ಹಾಗೂ ಬೃಹತ್ ವಾಹನಗಳು ಈ ಸೇತುವೆಯ ಮೇಲೆ ಸಂಚರಿಸುತ್ತಿವೆ. ಬಸ್‍ಗಳು ಸಂಚರಿಸುವ ಸಂದರ್ಭ ಹಿಂದಿನ ಒಂದು ಚಕ್ರ ಸೇತುವೆಯ ಹೊರಭಾಗದಲ್ಲಿರುತ್ತದೆ.

ಅತ್ಯಂತ ಕಿರಿದು ಹಾಗೂ ಶಿಥಿಲಾವಸ್ಥೆಯ ಹಂತಕ್ಕೆ ತಲುಪಿರುವ ಈ ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಹತ್ತಾರು ಬಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಕವಡೆಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ. ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಹಿನ್ನೆಲೆ ಯಾವ ಸಮಯದಲ್ಲಿ ಸೇತುವೆ ಕುಸಿಯುವದೋ ಎಂಬ ಭೀತಿಯಲ್ಲಿಯೇ ಸಂಚರಿಸಬೇಕಾಗಿದೆ ಎಂದು ಹರಗ ಗ್ರಾಮಸ್ಥ ಹಾಗೂ ಗ್ರಾ.ಪಂ. ಸದಸ್ಯ ತ್ರಿಶೂಲ್ ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಹಲವು ದಶಕಗಳಿಂದ ಈ ಸೇತುವೆಯನ್ನು ದುರಸ್ತಿಗೊಳಿಸುವಂತೆ ಇಲಾಖೆಗೆ ಮನವಿ ನೀಡಿದ್ದರೂ ಯಾವದೇ ಪ್ರಯೋಜನವಿಲ್ಲ. ಈ ಹಿಂದೆ ಲೋಕೋಪಯೋಗಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭ ಕೊಡಗು ಪ್ಯಾಕೇಜ್‍ನಡಿ ತಕ್ಷಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಇದಾಗಿ ವರ್ಷ ಕಳೆದರೂ ಯಾವದೇ ಪ್ರಗತಿ ಕಂಡಿಲ್ಲ. ನಮಗಳ ಮನವಿಗಳು ಇಲಾಖೆಯ ಕಸದಬುಟ್ಟಿ ಸೇರುತ್ತಿವೆ ಎಂದು ತ್ರಿಶೂಲ್ ಅವರು ಅಸಮಾಧಾನ ಹೊರಹಾಕಿದ್ದಾರೆ.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ಆಗಮಿಸಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಯನ್ನು ಪರಿಶೀಲಿಸಿ, ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಜನಪ್ರತಿನಿಧಿಗಳೂ ಸಹ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಈ ವ್ಯಾಪ್ತಿಯ ಜನರ ದಶಕಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಗ್ರಾಮಸ್ಥರಾದ ಶರಣ್ ಒತ್ತಾಯಿಸಿದ್ದಾರೆ.

- ವಿಜಯ್ ಹಾನಗಲ್