*ಗೋಣಿಕೊಪ್ಪಲು, ಮೇ 28: ಯುವ ಸಮುದಾಯ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳಯದೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಬಲ ಹೊಂದಲು ಸಾಧ್ಯ ಎಂದು ತಿರುಚಿ ಆರ್‍ಗನೈಜೇಶನ್ ವೆಲ್‍ಫೇರ್ ಸೊಸೈಟಿ ಅಧ್ಯಕ್ಷೆ ಸುಧಾ ನಾರಾಯಣ್ ತಿಳಿಸಿದರು.ಗೋಣಿಕೊಪ್ಪ ಅನುದಾನಿ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಮಡಿವಾಳ ಸಮುದಾಯದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ವಿಶ್ವಾಸ, ಪ್ರೇಮ ಮತ್ತು ಒಗ್ಗಟ್ಟು ಬೆಳೆಯಲು ಕ್ರೀಡೆ ಸಹಕಾರಿಯಾಗಲಿದೆ ಎಂದರು.

ಮಡಿವಾಳ ಸಮಾಜದ ಅಧ್ಯಕ್ಷ ಎಂ.ಡಿ. ನಂಜಪ್ಪ ಮಾತನಾಡಿ ಜನಾಂಗದ ಒಗ್ಗಟ್ಟಿಗೆ ಕ್ರೀಡೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸಮುದಾಯದವರ ಪರಿಚಯ ವಾಗಲು ಕ್ರೀಡೆಯನ್ನು ಆಯೋಜಿಸಲಾಗಿದೆ. ಸುಮಾರು 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿವೆ. ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಂಡು ತಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ ಸಮುದಾಯದ ಯುವಕರು ಕ್ರೀಡೆಯಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿ ಕೊಳ್ಳಬೇಕು; ಕ್ರೀಡಾ ಚಟುವಟಿಕೆಗಳು ಯುವಕರ ಪ್ರತಿಭೆಗೆ ವೇದಿಕೆ ಎಂದರು.

ಈ ಸಂದÀರ್ಭ ಸುಶೀಲ ಅಪ್ಪಾಜಿ, ಖಜಾಂಜಿ ಎಂ.ಎಲ್. ಸತೀಶ್, ನಿರ್ದೇಶಕ ವಿಷ್ಣು, ಕಮಲ್ ಹಾಜರಿದ್ದರು.

ವರದಿ: ಎನ್.ಎನ್. ದಿನೇಶ್