ಮೂರ್ನಾಡು, ಮೇ 29 : ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ಇವರ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಕ್ರೀಡೋತ್ಸವದಲ್ಲಿ ಕ್ರಿಕೆಟ್ ಪ್ರಶಸ್ತಿಯನ್ನು ಕೊಡಗು ಮರಾಟಿ ಪ್ಯಾಂಥರ್ಸ್ ತಂಡ ತನ್ನದಾಗಿಸಿಕೊಂಡಿತು. ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಕ್ರೀಡೋತ್ಸವದ ಕ್ರಿಕೆಟ್ ಪಂದ್ಯದಲ್ಲಿ ಕೊಡಗು ಮರಾಟಿ ಪ್ಯಾಂಥರ್ಸ್ ತಂಡ ಶಿವಾಜಿ ಬ್ರದರ್ಸ್ ಚೆಂಬು ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಅಂತಿಮ ಹಣಾಹಣಿಯಲ್ಲಿ ಶಿವಾಜಿ ಬ್ರದರ್ಸ್ ಚೆಂಬು ತಂಡವು ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡು ನಿಗದಿತ 6 ಓವರ್‍ಗೆ 6 ವಿಕೆಟ್ ಕಳೆದುಕೊಂಡು 52 ರನ್‍ಗಳ ಗುರಿನೀಡಿತು.

(ಮೊದಲ ಪುಟದಿಂದ) ಇದನ್ನು ಬೆನ್ನತ್ತಿದ ಕೊಡಗು ಮರಾಟಿ ಪ್ಯಾಂಥರ್ಸ್ ತಂಡ 4 ಓವರ್‍ನಲ್ಲಿ 3 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿ ವಿನ್ನರ್ಸ್ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಸೇರಿಸಿಕೊಂಡು ಶಿವಾಜಿ ಬ್ರದರ್ಸ್ ಚೆಂಬು ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ ಸಮಾರಂಭ : ಬೆಳಗಾವಿ ಭಾರತೀಯ ಅನಿಲ ಪ್ರಾಧಿಕಾರ ಪ್ರಧಾನ ವ್ಯವಸ್ಥಾಪಕ ಎಸ್. ವಿಜಯಾನಂದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿ ಯಾಗಿದೆ. ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಇಂದು ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿಯಾಗುತ್ತಿರುವದು ವಿಪರ್ಯಾಸ. ಮಕ್ಕಳ ವಿದ್ಯೆಯತ್ತ ಗಮನ ಹರಿಸಿ ಉನ್ನತ ಹುದ್ದೆಗೆ ಸೇರಿಕೊಂಡು ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸುವಂತೆ ಕರೆನೀಡಿದರು.

ವೀರಾಜಪೇಟೆ ತಾಲೂಕು ಭಾಜಪದ ಸಂಘಟನಾ ಕಾರ್ಯದರ್ಶಿ ಪರಮೇಶ್ವರ್ ಅಧ್ಯಕ್ಷತೆ ವಹಿಸಿದರು. ಕೊಡಗು ಜಿಲ್ಲಾ ಮರಾಠ ಮಾರಾಟಿ ಸಮಾಜ ಸೇವಾ ಸಂಘ ತಾಳತ್ತಮನೆ ಸ್ಥಾಪಕಾಧ್ಯಕ್ಷ ಕೆ.ಸಿ. ವಾಮನ್ ನಾಯ್ಕ್, ಮಾಜಿ ಅಧ್ಯಕ್ಷ ಎಂ.ಟಿ. ಚೆನಿಯಪ್ಪ, ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್. ನಾಯ್ಕ, ಕೊಡಗು ಜಿಲ್ಲಾ ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ಅಧ್ಯಕ್ಷ ಎಂ.ಎಸ್. ದಿವ್ಯಕುಮಾರ್, ಪಾಲಂಗಾಲ ಗ್ರಾಮದ ಕೃಷಿಕ ಎಂ.ಕೆ. ಬಾಬು ಇನ್ನಿತರರು ಹಾಜರಿದ್ದರು.

ಮಹಾಸಭೆ : ಸಂಘದ 21ನೇ ವಾರ್ಷಿಕ ಮಹಾಸಭೆ ಈ ಸಂದರ್ಭದಲ್ಲಿ ನಡೆಸಲಾಯಿತು. ಸಭೆಯಲ್ಲಿ ಮರಣ ಹೊಂದಿದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಕಾರ್ಯದರ್ಶಿ ಎಂ.ಇ. ಪವನ್ ಕಳೆದ ಸಾಲಿನ ವರದಿ ವಾಚನ ಲೆಕ್ಕಪತ್ರ ಮಂಡಿಸಿದರು. ಸಮಾಜದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಪ್ರತೀಕ್ಷ, ಕೆ.ಎನ್. ಪ್ರಜ್ಞಾ, ಚೇತನ್ ಎಂ. ನಾಯ್ಕ್, ಮಿಥುನ್ ಎಂ. ನಾಯ್ಕ್, ಲಾವಣ್ಯ, ಶಿವಾನಂದ್ ಪ್ರತಿಭಾ ಪುರಸ್ಕಾರ ಗಳನ್ನು ಪಡೆದುಕೊಂಡರು.

ಕ್ರೀಡೋತ್ಸವದಲ್ಲಿ ಸಮಾಜದ ಮಹಿಳೆ, ಪುರುಷರಿಗೆ ಭಾರದ ಗುಂಡು ಎಸೆತ, ನಿಂಬೆ ಹಣ್ಣು ಚಮಚ ಓಟ, ಸೂಜಿಗೆ ನೂಲು ಹಾಕುವ ಓಟ, ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಗೋಣಿಚೀಲ ಜಿಗಿತ, ಸಂಗೀತ ಕುರ್ಚಿ, ಕಪ್ಪೆ ಜಿಗಿತ, ನಡಿಗೆ ಸ್ಪರ್ಧೆ, ವಿವಿಧ ಬಗೆಯ ಓಟದ ಸ್ಪರ್ಧೆಗಳು, ಹಗ್ಗಜಗ್ಗಾಟ ನಡೆಯಿತು. ವಿಜೇತರಾ ದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.