ಸುಂಟಿಕೊಪ್ಪ,ಮೇ.28: ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥವಾಗಿ ಆಯೋಜಿಸಲಾಗಿದ್ದ 22ನೇ ವರ್ಷದ ರಾಜ್ಯ ಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಭಾನುವಾರ ನಡೆದ ಫೈನಲ್ ಪಂದ್ಯಾವಳಿಯು ಜೆಆರ್‍ಟಿ ಮೊಗ್ರಲ್ ಕುಂಬ್ಳೆ ಹಾಗೂ ಹೋರಿಜನ್ ಬೆಂಗಳೂರು ತಂಡಗಳ ನಡುವೆ ನಡೆದು ಕುಂಬ್ಳೆ ತಂಡವು 4-1 ಗೋಲುಗಳಿಂದ ದಿ. ಡಿ. ಶಿವಪ್ಪ ‘ಗೋಲ್ಡ್ ಕಪ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಫೈನಲ್ ಪಂದ್ಯವು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಫುಟ್‍ಬಾಲ್ ಪ್ರೇಮಿಗಳಿಗೆ ರಸದೌತಣ ಒದಗಿಸಿತು.

ಪಂದ್ಯದ ಪ್ರಥಮಾರ್ಧದಲ್ಲಿ ಚೆಂಡು ಬೆಂಗಳೂರು ತಂಡದ ಹತೋಟಿಯಲ್ಲಿತ್ತಾದರೂ ಮೊಗ್ರಲ್ ಕುಂಬ್ಳೆ ತಂಡದ ಮುನ್ನಡೆ ಆಟಗಾರ ರೋಂಟಿ 18 ನಿಮಿಷದಲ್ಲಿ ಹೊಡೆದ ಗೋಲಿನಿಂದ ಬೆಂಗಳೂರು ತಂಡ ವಿಚಲಿತಗೊಂಡಿತು. ಅದರೂ ಛಲಬಿಡದ ಬೆಂಗಳೂರು ತಂಡ ಆಟವನ್ನು ಮುಂದುವರಿಸಿತು. ಈ ಮಧ್ಯೆ ಮತ್ತೊಂದು ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಕುಂಬ್ಳೆ ತಂಡದ ಮಧ್ಯಕ್ರಮಾಂಕದ ಆಟಗಾರ ರತೀಶ್ 25ನೇ ನಿಮಿಷದಲ್ಲಿ ಹೊಡೆದ ಅತ್ಯುತ್ತಮ ಗೋಲಿನಿಂದ ಮೊದಲಾರ್ಧ ಮುಗಿಯುವ ವೇಳೆ ಕುಂಬ್ಳೆ ತಂಡವು ಬೆಂಗಳೂರು ತಂಡದ ವಿರುದ್ಧ 2-0 ಗೋಲುಗಳ ಮುನ್ನಡೆ ಕಾಯ್ದುಕೊಂಡಿತು.

ದ್ವಿತೀಯಾರ್ಧದಲ್ಲೂ 10ನೇ ನಿಮಿಷದಲ್ಲಿ ಕುಂಬ್ಳೆ ತಂಡದ ರತೀಶ್, ಮಧ್ಯಮಕ್ರಮಾಂಕದ ಆಟಗಾರ ಕಲಾಲ್ 26 ನೇ ನಿಮಿಷದಲ್ಲಿ ಗೋಲು ಬಾರಿಸುವ ದರೊಂದಿಗೆ ಆಘಾತ ನೀಡಿದರು. ಆಟ ಮುಗಿಯುವ ಕೊನೆಯ ಕ್ಷಣದಲ್ಲಿ ಬೆಂಗಳೂರು ತಂಡದ ಕಿರಣ್ ಗೋಲು ಬಾರಿಸುವದರ ಮೂಲಕ ಗೋಲಿನ ಅಂತರವನ್ನು ತಗ್ಗಿಸಿದರಾದರೂ ಕೊನೆಯಲ್ಲಿ ಕುಂಬ್ಳೆ ತಂಡವು 4-1 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಕಳೆದ 18 ವರ್ಷಗಳಿಂದ ಗೋಲ್ಡ್‍ಕಪ್ ಪ್ರಶಸ್ತಿಗಾಗಿ ಸೆಮಿಫೈನಲ್ ಹಂತದವರೆಗೆ ಬಂದು ನಿರಾಶೆಯಿಂದ ಹಿಂತಿರುಗುತ್ತಿದ್ದ ಕುಂಬ್ಳೆ ತಂಡವು ಪ್ರಥಮ ಬಾರಿಗೆ ದಿ. ಡಿ. ಶಿವಪ್ಪ ಸ್ಮಾರಣಾರ್ಥ ಗೋಲ್ಡ್ ಕಪ್ ಅನ್ನು ತನ್ನ ಮುಡಿಗೇರಿಸಿಕೊಂಡು ಸಂಭ್ರಮಾಚರಣೆ ಮಾಡಿತು. ಫೈನಲ್ ಪಂದ್ಯವನ್ನು ಟ್ರೋಫಿ ದಾನಿ ವಿನೋದ್ ಶಿವಪ್ಪ ಉದ್ಘಾಟಿಸಿದರು.