ವೀರಾಜಪೇಟೆ, ಮೇ 28: ಮಳೆಗಾಲ ಪ್ರಾರಂಭಕ್ಕೆ ಮುಂಚಿತವಾಗಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗದಂತೆ ಮರದ ಕೊಂಬೆಗಳನ್ನು ಕಡಿದು ಹಾಗೂ ಮುರಿದು ಬಿದ್ದಿರುವ ಕಂಬಗಳನ್ನು ದುರಸ್ತಿ ಪಡಿಸಿ ಮಳೆಗಾಲದಲ್ಲಿಯೂ ಜನರಿಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಎಚ್ಚರಿಕೆ ಕ್ರಮ ವಹಿಸಬೇಕು ಎಂದು ವಿದ್ಯುತ್ ಸರಬ ರಾಜು ನಿಗಮದ ಚಾಮರಾಜನಗರ ಮತ್ತು ಕೊಡಗು ವಿಭಾಗದ ಅಧೀಕ್ಷಕ ಮೈಸೂರಿನ ಕೆ. ರಾಮಚಂದ್ರ ವೀರಾಜಪೇಟೆ ಸೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವೀರಾಜ ಪೇಟೆ ಶಾಖೆಯ ಸಹಾಯಕ ಇಂಜಿನಿ ಯರ್ ಕಚೇರಿಯ ಸಭಾಂಗಣದಲ್ಲಿ ಗ್ರಾಹಕರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮಚಂದ್ರ ಅವರು ಈಗಾಗಲೇ ಕೊಡಗು ಜಿಲ್ಲೆಯಲ್ಲಿ 400 ರಿಂದ 500 ಕಂಬಗಳು ಮುರಿದು ಬಿದ್ದಿವೆ ಅದನ್ನು ಸರಿಪಡಿಸಿ ಮಳೆಗಾಲ ಪ್ರಾರಂಭವಾಗುವ ಮುಂಚೆ ಮುಂಜಾಗೃತ ಕ್ರಮವಾಗಿ ಪಟ್ಟಣಗಳಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಕೂಡಲೇ ಸರಿಪಡಿಸಿ ತಕ್ಷಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಎಂ. ಪ್ರಶಾಂತ್ ಮಾತನಾಡಿ, ಕೆದಮುಳ್ಳೂರು ಗ್ರಾಮದಲ್ಲಿ ಕಳೆದ ಒಂದು ವರ್ಷದ ಹಿಂದೆ ಕಂಬ ಮುರಿದು ವಿದ್ಯುತ್ ತಂತಿ ತಗುಲಿ ಎರಡು ಹಸುಗಳು ಮೃತಪಟ್ಟಿದ್ದರೂ ಕೂಡ ಇದುವರೆಗೂ ಅವರಿಗೆ ಪರಿಹಾರ ದೊರಕಿಲ್ಲ ಎಂದಾಗ. ಅದಕ್ಕೆ ಉತ್ತರಿಸಿದ ಇಂಜಿನಿಯರ್ ಸರ್ಕಾರಕ್ಕೆ ವರದಿ ಕಳಿಸಲಾಗಿದ್ದು, ಇನ್ನು 15 ದಿನಗಳಲ್ಲಿ ಪರಿಹಾರ ನೀಡುವದಾಗಿ ತಿಳಿಸಿದರು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ತಂತಿಗಳು ಕೈಗೆಟುಕುವ ರೀತಿ ಹಾದು ಹೋಗಿದ್ದು ಅಪಾಯದ ಭೀತಿ ಇರುವದರಿಂದ ಕೂಡಲೇ ಸರಿಪಡಿಸುವಂತೆ ಸಭೆಯಲ್ಲಿದ್ದ ಗ್ರಾಹಕರು ಆಗ್ರಹಿಸಿದರು. ಇಂಜಿನಿಯರ್ ರಾಮಚಂದ್ರ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿ ವಿದ್ಯುತ್ ತಂತಿ ಜೋತು ಬೀಳಲು ಕೆಲವು ವರ್ಷಗಳ ಹಿಂದೆ ನೆಟ್ಟಿರುವ ಕಂಬಗಳಿಂದ ಮಾತ್ರ ಹಾಗಾಗಿದೆ. ಈಗ ಆಧುನಿಕವಾಗಿ 9 ಮೀಟರ್ ಎತ್ತರದ ಕಂಬದಲ್ಲಿ ವಿದ್ಯುತ್ ತಂತಿಯ ಸಂಪರ್ಕವನ್ನು ಎಳೆಯುತ್ತಿದ್ದೇವೆ ಈಗ ಹಾಕಿರುವ ಕಂ¨ಗಳಿಂದ ಯಾವದೇ ತೊಂದರೆಯಾಗಲಾರದು. ಜೂನ್ 15 ರೊಳಗೆ ಉಳಿದ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಲಾಗುವದು. ಜನರ ಸಮಸ್ಯೆಗಳನ್ನು ಬಗೆಹರಿಸಲು ಮೂರು ತಿಂಗಳಿಗೊಮ್ಮೆ ಗ್ರಾಹಕರ ಸಭೆ ನಡೆಸಲಾಗುವದೆಂದು ಮಾಹಿತಿ ನೀಡಿದರು.

ಗ್ರಾಹಕರ ಕುಂದು ಕೊರತೆಗಳ ಸಭೆಯಲ್ಲಿ ಸಲಹಾ ಸಮಿತಿಯ ಸದಸ್ಯ ದಾಮೋದರ್ ಆಚಾರ್ಯ ಮತ್ತಿತರರು ಹಾಗೂ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಎಸ್. ಸುರೇಶ್, ಮಡಿಕೇರಿಯ ಇಂಜಿನಿಯರ್‍ಗಳು ಉಪಸ್ಥಿತರಿದ್ದರು. ವೀರಾಜಪೇಟೆ ಸುತ್ತ ಮುತ್ತಲ ಪ್ರದೇಶ, ಪಾಲಿಬೆಟ್ಟ, ಕೆದಮುಳ್ಳೂರು, ಇತರೆಡೆಗಳಿಂದಲೂ ಗ್ರಾಹಕರುಗಳು ಭಾಗವಹಿಸಿದ್ದರು.